ರಾಮ ಚಿತ್ರ ಕಥಾ
ಐದಾರು ವರ್ಷವಿರುವಾಗಲೇ ಇದ್ದಿಲುಗಳಿಂದ ದೇಗುಲದ ಗೋಡೆಗಳ ಮೇಲೆಲ್ಲ ಗೀಚಾಡುತ್ತಿದ್ದ, ಹಸಿರೆಲೆಗಳ ರಸವನ್ನೇ ಬಣ್ಣವೆಂಬಂತೆ ಹಚ್ಚುತ್ತಿದ್ದ, ಬಾಗಿಲ ಮೇಲಿನ ಅರಿಶಿನ-ಕುಂಕುಮ ಕಂಡಾಕ್ಷಣ ಅದರಿಂದ ರೇಖೆಗಳನ್ನು ಮೂಡಿಸಿ ಮುಗುಳ್ನಗುತ್ತಿದ್ದ ಪ್ರತಿಭೆ ಕರ್ನಾಟಕದ ಹೆಸರಾಂತ ಕಲಾವಿದ ಕೆ.ಎನ್. ರಾಮಚಂದ್ರನ್.
ತಮಿಳುನಾಡಿನ ಕಡಲತೀರದಲ್ಲಿ ಜನಿಸಿದ ರಾಮಚಂದ್ರನ್, ಶಾಲೆಯ ಸಮಯದಲ್ಲಿ ನೋಟ್ ಪುಸ್ತಕಗಳಲ್ಲಿ ಬರೀ ದೋಣಿ ಚಿತ್ರವನ್ನೇ ಬಿಡಿಸುತ್ತಿದ್ದರಂತೆ. ಎಸ್ಸೆಸ್ಸೆಲ್ಸಿಯಲ್ಲಿ ನಪಾಸಾಗಲು ಕಾರಣ ಪರೀಕ್ಷೆಯಲ್ಲಿ ಅಕ್ಷರದ ಬದಲು ಚಿತ್ರ ಬರೆದಿದ್ದು!
ಮುಂದೆ ರೆಂಬ್ರಾಂಟ್ ಮತ್ತು ರವಿವರ್ಮರ ಕಲೆಗೆ ಮಾರುಹೋದ ರಾಮಚಂದ್ರನ್, ಮದ್ರಾಸ್ನ ಹೆಸರಾಂತ ಎವಿಎಂ ಸ್ಟುಡಿಯೋದಲ್ಲಿ ಫಿಲ್ಮಿ ಕಟೌಟ್ ಹಾಗೂ ಬ್ಯಾನರ್ ಕಲಾವಿದರಾಗಲು ವಿದ್ಯಾರ್ಥಿಯಾಗಿ ಸೇರಿಕೊಂಡರು. ರಾಮಚಂದ್ರನ್ ರಚಿಸಿದ ಅತಿ ಎತ್ತರದ ಕಟೌಟ್ 168 ಅಡಿ ಇದ್ದು, ಅದಕ್ಕೆ ಬಣ್ಣ ಹಚ್ಚಲು ಬಕೆಟ್ನಲ್ಲಿ ಕಲರ್ ತುಂಬಿ ಈಚಲ ಕಸಬರಿಕೆಯನ್ನೇ ಬ್ರಶ್ ಮಾಡಿಕೊಂಡಿದ್ದರಂತೆ. ಚಿತ್ರದ ಒಂದೊಂದು ಕಣ್ಣೇ ಹತ್ತಡಿಯಿತ್ತಂತೆ!
1965ರಲ್ಲಿ ಕಲಾವೃತ್ತಿಯನ್ನು ಬೆನ್ನತ್ತಿ ಬೆಂಗಳೂರಿಗೆ ಬಂದರು. ನಂತರ ಚಲನಚಿತ್ರದ ಪೋಸ್ಟರ್ಗಳನ್ನು ಒಂದೇ ವರ್ಣದಲ್ಲಿ ನೆರಳು- ಬೆಳಕನ್ನು ತೋರಿಸಿ ಹೆಸರು ಗಳಿಸಿದ್ದನ್ನು ಮರೆಯುವಂತಿಲ್ಲ. 1990ರ ವೇಳೆಗೆ ಬ್ಯಾನರ್ ಆರ್ಟ್ನಿಂದ ಕ್ಯಾನ್ವಾಸ್ ಬಳಿ ಬಂದು ನಿಂತ ರಾಮಚಂದ್ರನ್ ಕಲಾಕೃತಿಗಳು ಪ್ರಸ್ತುತ ಲಕ್ಷದ ಮೇಲೆ ಲಾಭ ಮಾಡುತ್ತಿವೆ.
ಸಂಸಾರ ಸುಮಧುರ
ಕಲಾವಿದ ಹೆಚ್ಚು ಕಾಲವನ್ನು ಕಲೆಗಾಗಿ ಮೀಸಲಿಟ್ಟಿರುವುದರಿಂದ ಸಂಸಾರದ ಜವಾಬ್ದಾರಿಯನ್ನು ಸೂಸೂತ್ರವಾಗಿ ನಡೆಸಿಕೊಂಡು ಬರುತ್ತಿರುವವರು ಪತ್ನಿ ಜಯಲಕ್ಷ್ಮಿ. ಈ ದಂಪತಿಗೆ ಐದು ಮಕ್ಕಳಿದ್ದು ಎಲ್ಲರೂ ಕಲಾಕ್ಷೇತ್ರದಲ್ಲೇ ದುಡಿಯುತ್ತಿದ್ದಾರೆ. ಶ್ರೀಯುತರು ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿರುವುದಲ್ಲದೆ ರಾಜ್ಯ- ರಾಷ್ಟ್ರೀಯ ಚಿತ್ರಕಲಾ ಶಿಬಿರ ಹಾಗೂ ಪ್ರದರ್ಶನಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.
-ಡಿ.ಆರ್. ಸುರೇಂದ್ರನಾಥ್
drsurendranatha@gmail.com