ಕಂಪನಿಯ ಕ್ಯಾಬ್, ಬಸ್, ಟ್ಯಾಕ್ಸಿಗಳಲ್ಲಿ ಓಡಾಡುವವರಿಗೆ ಕುಳಿತುಕೊಳ್ಳಲು ಆರಾಮದಾಯಕ ಆಸನಗಳಿರುತ್ತವೆ. ದೂಡುವ, ಒತ್ತಿಸಿಕೊಂಡು ಬರುವ, ಮೈ ಮೇಲೆ ಬೀಳುವ ಪ್ರಸಂಗಗಳೇ ಇರುವುದಿಲ್ಲ. ಆದರೆ ಪ್ರಯಾಣಿಕರು ಶೂನ್ಯದೆಡೆಗೆ ದೃಷ್ಟಿ ಬೀರುತ್ತ ಸಮಯ ವ್ಯಯಿಸುತ್ತಾರಲ್ಲಾ ಎಂಬುದು ಚಿಂತೆ!
ಬಸ್ಸಿನ ಕೊನೆಯ ಸಾಲಲ್ಲಿ ಕೂರುವ 55 ವರ್ಷದ ಗೋಪಾಲ್ ಐಟಿ ಸೇರಿದಾಗಿನಿಂದ ದೇವರ ಧ್ಯಾನ ಮಾಡಲು ಸಮಯವೇ ಸಿಗುತ್ತಿರಲಿಲ್ಲವಂತೆ. ಅವರೀಗ ಮೊಬೈಲ್‌ನಲ್ಲಿ ಭಜನೆ, ಅಧ್ಯಾತ್ಮ ಚಿಂತನೆಗಳುಳ್ಳ ಆಡಿಯೋ ಹಾಕಿಕೊಂಡು ಕೇಳುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಆಫೀಸಿನ ಕೆಲಸಗಳು ಒತ್ತಡ ಎನಿಸುವುದಿಲ್ಲವಂತೆ. ಪ್ರಸನ್ನ ಚಿತ್ತರಾಗಿ ಕೆಲಸ ಮಾಡಿಮುಗಿಸುತ್ತಾರಂತೆ.
ಹಲವರು ಎಫ್‌ಎಂ ಕೇಳುತ್ತ ಸಾಗುತ್ತಾರೆ. ಅಲ್ಲಿ ಬರೀ ಗಾಸಿಪ್‌ಗಳದ್ದೇ ಹಾರಾಟ. ಆರ್‌ಜೆಗಳ ಲಂಗುಲಗಾಮಿಲ್ಲದ ಮಾತುಗಳು. ಇದರಿಂದ ಪ್ರಯೋಜನ ಆಗುವುದು ದೂರದ ಮಾತೇ. ಮೀನಾ ಎಂಬವರು ಒಂದೂವರೆ ತಾಸಿನ ಪ್ರಯಾಣವನ್ನು ಸದ್ಬಳಕೆ ಮಾಡುವ ರೀತಿಯೇ ಅಚ್ಚರಿ. ಪೇಪರ್‌ನಲ್ಲೇ ಪುಷ್ಪ, ತೋರಣ ಸೇರಿದಂತೆ ಅನೇಕ ಕಲಾಕೃತಿ ಹೆಣೆಯುತ್ತಾರೆ. ಬಸ್ಸು ಆಫೀಸಿನ ಮುಂದೆ ಬಂದು ನಿಲ್ಲುವುದಕ್ಕೆ ಮುನ್ನ ಅವರ ಕೈಯಲ್ಲೊಂದು ಚೆಂದದ ಕಲಾಕೃತಿ ರೆಡಿ. ಮೊದಲು ಬಸ್‌ನಲ್ಲಿ ಕೂತು ಕಲಾಕೃತಿ ಹೆಣೆಯುವಾಗ ಹೆಚ್ಚಿನವರು ನೋಡಿ ನಕ್ಕಿದ್ದರಂತೆ. ಆದರೆ ಈಗ ಎಲ್ಲರೂ ಅಚ್ಚರಿಯಿಂದ ನೋಡುತ್ತಾರಂತೆ. ಉತ್ತಮ ಕೆಲಸ ಎಂದು ಹೊಗಳುತ್ತಾರಂತೆ.
ಬಸ್ಸಿಗಿಂತ ಕ್ಯಾಬಿನಲ್ಲಿ ಹೋಗುವವರ ಪರಿಸ್ಥಿತಿ ಬೇರೆ ಇರುತ್ತದೆ. ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರಿಗೆ ವಾಕ್‌ಚತುರತೆ ಹೆಚ್ಚು. ದಿನವಿಡೀ ಸುಮ್ಮನೆ ವಾಹನ ಚಲಾಯಿಸುತ್ತಿದ್ದರೆ ದಣಿವು ಹೆಚ್ಚಾಗುತ್ತದೆಯಂತೆ. ಅದಕ್ಕಾಗಿಯೇ ತನ್ನ ಗಾಡಿಗೆ ಹತ್ತಿದ ಪ್ರಯಾಣಿಕರೊಂದಿಗೆ ಹರಟುವ ರೂಢಿ ಬಹುತೇಕ ಚಾಲಕರದ್ದು. 'ಎರಡು ತಾಸು ಮಲಗಿ ಎದ್ದು ಹೋಗಲು ಇದೇನು ಲಾಡ್ಜೇ?' ಎಂದು ಕ್ಯಾಬ್‌ನ ಚಾಲಕ ಕೇಳಿದ್ದ. ಆತನ ಮಾತಿನಲ್ಲಿ ಸತ್ಯವಿದೆ ಎನ್ನಿಸಿತು. ಕೈಯಲ್ಲೊಂದಿಷ್ಟು ಸಮಯವಿದ್ದಾಗ ಏನಾದರು ಉಪಯೋಗವಾಗುವಂಥ ಕೆಲಸ ಮಾಡಬೇಕೆಂಬ ಅಭಿಲಾಷೆ ಹುಟ್ಟಿತು.
ಸದ್ಯ ಕ್ಯಾಬಿನಲ್ಲಿ ಪ್ರಯಾಣಿಕರೆಲ್ಲರಿಗೂ ಕನ್ನಡದಲ್ಲಿ ಅಂದಿನ ವಾರ್ತೆ ಓದಿ ಹೇಳುವುದು, ಕನ್ನಡ ಪತ್ರಿಕೆ, ಪುಸ್ತಕ ಕೊಟ್ಟು ಓದಲು ಪ್ರೇರೇಪಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ಫೇಸ್‌ಬುಕ್‌ನಲ್ಲಿರುವ ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಪೇಜ್‌ಗಳ ಪರಿಚಯ ಮಾಡಿಕೊಡುತ್ತಿದ್ದೇನೆ. ನಿತ್ಯದ ತಾಸಿನ ಪ್ರಯಾಣ ಓದಲು ಮತ್ತು ಕನ್ನಡದ ಕಂಪನ್ನು ಇತರರಿಗೆ ಹರಡಲು ಬಳಸಿಕೊಳ್ಳುತ್ತಿರುವ ತೃಪ್ತಿ ನನಗಿದೆ.
= ಪ್ರದೀಪ್ ರಾವ್