ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅನತಿ ದೂರದಲ್ಲೇ ಇರುವ ಕನ್ನಡ ಗಣಕ ಪರಿಷತ್ತಿನ ಕಚೇರಿಗೆ ಯಾರಾದರೂ ಯುವ ಉತ್ಸಾಹಿಗಳು ಹೋಗಿ ಕುಳಿತರೆ ಸಾಕು, ಹಿರಿಯ ಜೀವಿಯೊಬ್ಬರು ಸನಿಹದಲ್ಲೇ ಬಂದು ಕುಳಿತು ಆತ್ಮೀಯವಾಗಿ ಮಾತನಾಡುತ್ತಾ ನಮ್ಮ ಜ್ಞಾನದಾಹ ತಣಿಸತೊಡಗುತ್ತಾರೆ. ಅವರ ಸರಳ ಉಡುಗೆತೊಡುಗೆ, ಆತ್ಮೀಯತೆ ಕಂಡರೆ ಅವರೇ ಕನ್ನಡ ಗಣಕ ಪರಿಷತ್ತಿನ ಸಂಸ್ಥಾಪಕರೆಂದು ಯಾರು ಹೇಳಿದರೂ ನಂಬಲಾರಿರಿ. ತುಂಬಿದ ಕೊಡವದು, ತುಳುಕುವ ಮಾತೇ ಇಲ್ಲ.
ಜ್ಞಾನಿ, ವಿಜ್ಞಾನಿ, ಗಣಿತಜ್ಞ, ತಂತ್ರಜ್ಞಾನಿ, ಕನ್ನಡ ತಂತ್ರಜ್ಞ, ಎಲ್ಲಕ್ಕಿಂತ ಮಿಗಿಲಾಗಿ ಕನ್ನಡಾಭಿಮಾನಿ. ನೀವು ಸಿ.ವಿ. ಶ್ರೀನಾಥ ಶಾಸ್ತ್ರಿ ಅವರಿಗೆ ಎಂಥ ಗೌರವ ಕೊಟ್ಟಾದರೂ ಕರೆಯಬಹುದು.
'ಹಳ್ಳಿ'ಯಿಂದ ಬಂದ ವಿಜ್ಞಾನಿ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ 1944ರ ಸೆ.6ರಂದು ಜನಿಸಿದ ಶ್ರೀನಾಥ ಶಾಸ್ತ್ರಿಗಳು, ತಂದೆಯಿಂದಲೇ ಸಾಹಿತ್ಯ ಸಂಸ್ಕೃತಿ ಕಲೆಗಳ ಆರಾಧಕತನವನ್ನು ಬಳುವಳಿಯಾಗಿ ಪಡೆದರು. ಮೈಸೂರು ವಿವಿಯಿಂದ ರ್ಯಾಂಕಿನೊಂದಿಗೆ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಶೃಂಗೇರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣಿತ ಪ್ರಾಧ್ಯಾಪಕರಾಗಿ 6 ವರ್ಷ ಸೇವೆ ಸಲ್ಲಿಸಿದರು. ಬಳಿಕ ಭಾರತದ ಹೆಮ್ಮೆಯ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಯಲ್ಲಿ ವಿಜ್ಞಾನಿಯಾಗಿ, 31 ವರ್ಷ ಪ್ರಯೋಗಶಾಲೆಯಲ್ಲಿ ಕಳೆದುಹೋದರು. ಈ ಸಂದರ್ಭದಲ್ಲಿ ಪ್ರತ್ಯನುಕರಣೆ ಹಾಗೂ ವಿಶ್ಲೇಷಣೆಗೆ ಸಂಬಂಧಪಟ್ಟ ತಂತ್ರಾಂಶಗಳ ಸಿದ್ಧತೆಗೆ ಇವರು ನೀಡಿದ ಕೊಡುಗೆ ಅಪಾರ. ಇವುಗಳಲ್ಲಿ ವಿಮಾನದ ರೆಕ್ಕೆಗಳ ಮಾದರಿ ವಿನ್ಯಾಸ, ಪ್ರಯೋಗ ಪರೀಕ್ಷೆಗಳನ್ನು ಸಂಶೋಧನೆಗೆ ಉಪಯುಕ್ತವಾಗುವಂತೆ ನಮೂದಿಸಲು ಅಗತ್ಯ ಗಣಕೀಯ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದು, ಎಎಸ್‌ಡಬ್ಲ್ಯೂಎಸಿ ಪ್ರತ್ಯನುಕರಣೆಗಾಗಿ ವಾಯುಚಲನಾ ಮಾದರಿ, ಹಾರಾಟ ನಿಯಂತ್ರಣ, ಪ್ರತ್ಯನುಕರಣೆ ಪ್ರದರ್ಶನ ವ್ಯವಸ್ಥೆ ಇತ್ಯಾದಿ ಉನ್ನತ ತಾಂತ್ರಿಕ ವಿಷಯಗಳನ್ನು ಕುರಿತ ಕಾರ್ಯಗಳು ಉಲ್ಲೇಖನೀಯ.
ಬಹುಮುಖಿ
ಧ್ವನ್ಯತೀತ ವಾಯುಸುರಂಗ ಅಂತಾರಾಷ್ಟ್ರೀಯ ಸಂಸ್ಥೆ 1998ರಲ್ಲಿ ಒಟ್ಟಾವಾದಲ್ಲಿ ನಡೆಸಿದ ಸಮ್ಮೇಳನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧದ ಸಹಲೇಖಕರಾಗಿ, ಏರ್‌ಕ್ರಾಫ್ಟ್ ಡಿಸೈನ್ ಎಂಬ ಅಂತಾರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ತಮ್ಮ ನೂತನ ಸಂಶೋಧನಾ ವಿಷಯದ ಪ್ರಬಂಧಕಾರರಾಗಿ, ಒಟ್ಟಾರೆ 25ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳ ಲೇಖಕರಾಗಿ ಅನೇಕ ಪ್ರಶಂಸಾ ಪತ್ರಗಳನ್ನು ಪಡೆದಿದ್ದಾರೆ. ಇಷ್ಟೆಲ್ಲ ತಾಂತ್ರಿಕ ಕಾರ್ಯಗಳಲ್ಲಿ ನಿರತರಾಗಿದ್ದಾಗಲೇ 'ಕಣಾದ' ಎಂಬ ವಿಜ್ಞಾನ ವಾರ್ಷಿಕ ಪತ್ರಿಕೆಯನ್ನು ಎನ್‌ಎಎಲ್ ಕನ್ನಡ ಸಾಂಸ್ಕೃತಿಕ ಸಂಘದಿಂದ ಆರಂಭಿಸಿ 27 ವರ್ಷ ಅದರ ಸಂಪಾದನೆ, ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದು ಅವರ ಬಹುಮುಖಿ ವ್ಯಕ್ತಿತ್ವಕ್ಕೊಂದು ಕನ್ನಡಿ. ಶಾಸ್ತ್ರಿಗಳು ತಾವು ಬರೆದದ್ದಕ್ಕಿಂತ ಬರೆಸಿದ್ದೇ ಹೆಚ್ಚು. ಇಂದು ವಿಜ್ಞಾನ ಬರಹಗಾರರೆಂದು ಸ್ಥಾಪಿತರಾಗಿರುವ ಅನೇಕರು ತಮ್ಮ ಮೊದಲ ಬರಹಗಳನ್ನು 'ಕಣಾದ'ದಲ್ಲಿ ಬರೆದಿದ್ದಾರೆ. ಸತತವಾಗಿ ಉನ್ನತ ಮಟ್ಟದಲ್ಲಿ ಹೊರಬರುತ್ತಿರುವ ಈ ಪತ್ರಿಕೆಯಲ್ಲಿ ವಿಜ್ಞಾನ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ವಿಜ್ಞಾನ ವಿಷಯಗಳನ್ನು ಕುರಿತು ಬರೆಯುವ ಒತ್ತಾಸೆ ತುಂಬುವ ಕಾರ್ಯ ಶಾಸ್ತ್ರಿಗಳದ್ದು.
ದಾಖಲಾರ್ಹ ಕೃತಿಗಳು
ನೂರಕ್ಕೂ ಹೆಚ್ಚು ಬಾನುಲಿ ಭಾಷಣಗಳು ಹಾಗೂ ಇತರೆ ಸಂದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜ್ಞಾನ ಪ್ರಸರಣಾ ಕಾರ್ಯದಲ್ಲಿ ತೊಡಗಿಕೊಂಡ ಇವರು, ಗಣಕ ಯಂತ್ರಗಳು, ರೇಡಿಯೋ, ಧೂಮಕೇತು ಎಂಬ ಮೂರು ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಇವುಗಳಲ್ಲಿ ಗಣಕ ಯಂತ್ರಗಳು ಎಂಬ ಪುಸ್ತಕ ಆ ಕ್ಷೇತ್ರದ ಮೊಟ್ಟಮೊದಲ ಕನ್ನಡ ಪುಸ್ತಕವೆಂಬುದು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆಯೇ ಅಲ್ಲವೇ?
ಅತ್ಯುತ್ತಮ ಸಂಘಟಕ
ಕನ್ನಡ ಗಣಕ ಪರಿಷತ್ತು ಸ್ಥಾಪಿಸಿದ ಶಾಸ್ತ್ರಿಗಳು, ಗಣಕದಲ್ಲಿ ಕನ್ನಡ ಬಳಕೆಯ ಕುರಿತಂತೆ ಸರ್ಕಾರಕ್ಕೆ ಸಲಹೆಗಾರರಾಗಿ, ನುಡಿ ತಂತ್ರಾಂಶದ ಅಭಿವೃದ್ಧಿಯ ಜವಾಬ್ದಾರಿ, ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಏರ್ಪಡಿಸಿದ ಸಭೆಗಳಲ್ಲಿ ಕರ್ನಾಟಕ ಸರ್ಕಾರದ ಪರ ಭಾಗವಹಿಸಿ ಕನ್ನಡಕ್ಕೆ ಸಂಬಂಧಿಸಿದಂತೆ ಸೂಕ್ತ ಸಲಹೆಗಳನ್ನು ನೀಡಿದರು. ಯೂನಿಕೋಡ್ ಸಂಕೇತಗಳ ಸಿದ್ಧತೆಗೆ ಸಂಬಂಧಿಸಿಯೂ ಸಲಹೆ ನೀಡಿದರು. 1986ರಲ್ಲಿ ನಾಲ್ಕು ದಿನನಡೆದ ವಿಜ್ಞಾನ ಮತ್ತು ದರ್ಶನ ಶಾಸ್ತ್ರಗಳಲ್ಲಿ ವಿಷಯ ಪ್ರತ್ಯಕ್ಷಂ ಮತ್ತು 1989ರಲ್ಲಿ ವೇದಗಣಿತ ಎಂಬ ವಿಶಿಷ್ಟ ರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸಿದರು. 1987ರಲ್ಲಿ ಬೆಂಗಳೂರಿನಲ್ಲಿ ಸಂಸ್ಕೃತದಲ್ಲಿ ಜ್ಞಾನ ಪ್ರತಿನಿರೂಪಣೆ ಮತ್ತು ಅನುಮಾನ ಎಂಬ ಗಣಕ- ಸಂಸ್ಕೃತ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿದರು. ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಪ್ರಮುಖವಾಗಿ ಪ್ರೌಢಶಾಲಾ ಶಿಕ್ಷಕರಿಗೆ ವಿಜ್ಞಾನ ಶಿಕ್ಷಣದ ತರಬೇತಿ ಹಮ್ಮಿಕೊಂಡಿದ್ದು ರಾಜ್ಯಾದ್ಯಂತ ಶಿಕ್ಷಕರಿಗೆ ಇವರ ಪ್ರೀತಿಯ ಕೊಡುಗೆ.ಟಿ
- ಚಿನ್ಮಯ ಎಂ. ರಾವ್
chinmayamrao@gmail.com