ನರೇಂದ್ರ ದಾಮೋದರದಾಸ ಮೋದಿ. ತಕ್ಷಣಕ್ಕೆ ಓದಿದರೆ ಪದಗಳ ರಿದಮ್ ಮೋಹನದಾಸ ಕರಮಚಂದ ಗಾಂಧಿಯವರ ಹೆಸರು ನೆನಪಿಸುತ್ತದೆ. ಹೆಸರಿನ ಲಘುಗುರು ಬಿಡಿ. ಇಬ್ಬರ ನಡುವೆ ಹಲವು ವಿರೋಧಾಭಾಸಗಳ ಹೊರತಾಗಿಯೂ ಸಾಮ್ಯತೆಗಳೂ ಉಂಟು ಎಂಬುದನ್ನು ಒಪ್ಪಲೇಬೇಕು. ಇಬ್ಬರೂ ಗುಜರಾತ್ ಮೂಲದವರು. ಗಾಂಧೀಜಿ ಆಫ್ರಿಕಾಗೆ ಹೋದಾಗ ಅವಮಾನ ಅನುಭವಿಸಿದರೆ, ಮೋದಿ ಅಮೆರಿಕದ ವೀಸಾ ಪಡೆಯಲು ವಿಫಲವಾಗಿ ಅವಮಾನಗೊಂಡಿದ್ದರು. ಹಲವು ವೈಯಕ್ತಿಕ ವಿಷಯಗಳ ಬಗೆಗಿನ ಗುಸುಗುಸುಗಳ ನಡುವೆಯೂ ಮೆಜಾರಿಟಿ ಸಂಖ್ಯೆಯ ಭಾರತೀಯರು ಈ ಇಬ್ಬರೂ ವ್ಯಕ್ತಿಗಳನ್ನು ದೇಶದ ಸುಪ್ರೀಂ ಎಂಬಂತೆಯೇ ಕಂಡಿದ್ದಾರೆ. ಗಾಂಧಿ ಬ್ರಿಟಿಷರಿಂದ ಮುಕ್ತಿ ಕೊಟ್ಟರೆ, ಮೋದಿ ಇಟಾಲಿಯನ್ ಗಾಂಧಿಗಳಿಂದ ಮುಕ್ತಿ ಕೊಟ್ಟರು ಎಂಬ ಮಾತುಗಳು ಜನರಿಂದ ಕೇಳಿ ಬರುತ್ತಿದೆ. ಇರಲಿ. ಕೇವಲ ಕೆಲವು ಸರಳ ಹೋಲಿಕೆಗಳನ್ನು ಇಟ್ಟುಕೊಂಡು ಮೋದಿಯವರನ್ನು ಗಾಂಧೀಜಿಯವರೊಂದಿಗೆ ತುಲನೆ ಮಾಡುವುದು ಬಾಲಿಶ ಎನಿಸಬಹುದು. ಅದನ್ನು ಬದಿಗಿಡೋಣ.
ಸದ್ಯಕ್ಕೆ ಮೋದಿ ತಮ್ಮ ಬದುಕಿನ ಅತ್ಯಂತ ಉನ್ನತ ಘಟ್ಟ ತಲುಪಿ ನಿಂತಿದ್ದಾರೆ. ದೇಶಕ್ಕೂ ಆ ಎತ್ತರದ ಭರವಸೆ ತೋರಿಸಿದ್ದಾರೆ. ಆದರೆ, ನಿಜವಾದ ಪರೀಕ್ಷೆ ಶುರುವಾಗುವುದೇ ಇಂದಿನಿಂದ. ವಿವಾದಾತ್ಮಕ ವ್ಯಕ್ತಿತ್ವದಿಂದಲೇ ಯಶಸ್ಸಿನ ಏಣಿ ಏರುತ್ತಾ ಬಂದ ನರೇಂದ್ರ ಮೋದಿ ಶತಕೋಟಿಗೂ ಮೀರಿದ ಜನರ ನಿರೀಕ್ಷೆಗಳನ್ನು ತಲುಪಬಲ್ಲರಾ ಎಂಬುದನ್ನು ಕಾಲ ಉತ್ತರಿಸಬೇಕಿದೆ. ಈ ಹೊತ್ತಿನಲ್ಲಿ ಒಮ್ಮೆ ಬನ್‌ಟೀ ಅಂಗಡಿಯಿಂದ ಪಾರ್ಲಿಮೆಂಟಿನ ಅಧಿಪತಿಯಾಗುವ ತನಕದ ಜರ್ನಿಯನ್ನು ಒಮ್ಮೆ ಹಿಂದಿರುಗಿ ನೋಡುವುದು ಆಸಕ್ತಿದಾಯಕ ಅನಿಸೀತು.
ND ಎಂಬ ಕಾರ್ಯಕರ್ತನ ಉದಯ
ಮೋದಿ ಬದುಕು ಹೂವಿನ ಹಾಸಿಗೆ ಆಗಿಲ್ಲದೇ ಇದ್ದರೂ, ಬದುಕಿನಲ್ಲಿ ಅವರಿಷ್ಟದಂತೆಯೇ ಘಟನೆಗಳು ಸಂಭವಿಸುತ್ತ ಹೋದವು. ರೇಲ್ವೆ ಸ್ಟೇಷನ್ನಿನ ಟೀ ಅಂಗಡಿಯಲ್ಲಿ ಕೂತರೂ ಹೀರೋ. ಕಸ ಗುಡಿಸಿದರೂ ಹೀರೋ ಎಂಬಂತಾಗಿ ಹೋದ ನರೇಂದ್ರ. ಆರೆಸ್ಸೆಸ್ಸಿನಲ್ಲಿ ಮೋದಿಯನ್ನು ಕರೆಯುತ್ತಿದ್ದದ್ದು ND ಅಂತಲೇ. ಚಿಕ್ಕಂದಿನಲ್ಲೇ ಆರೆಸ್ಸೆಸ್ ಮತ್ತು ಎನ್‌ಸಿಸಿಯಲ್ಲಿ ಸಕ್ರಿಯವಾಗಿದ್ದು ಸದೃಢ ಶರೀರ ಮಾಡಿಕೊಂಡ ಮೋದಿ, ರಂಗಭೂಮಿಯ ಸಾಂಗತ್ಯದಿಂದ ತನ್ನ ದನಿ ಮತ್ತು ಆಂಗಿಕ ಭಾಷೆಯ ಮೇಲೆ ಹಿಡಿತ ಸಾಧಿಸಿದರು. ದಲಿತಪರ ವಿಷಯ ಹೊಂದಿದ್ದ ಏಕಪಾತ್ರಾಭಿನಯ ಮಾಡಿ ಶಭಾಷ್‌ಗಿರಿ ಪಡೆದಿದ್ದ ಮೋದಿಯಲ್ಲಿ ಆಗಲೇ ನಾಯಕತ್ವ ಗುಣಗಳು ಮತ್ತು ಸಿದ್ಧಾಂತಗಳು ಕಾಣಿಸಿದ್ದವು.
ಆರೆಸ್ಸೆಸ್ ಮತ್ತು ಮೋದಿ
ಮನೆಬಿಟ್ಟು ಬಂದ ನಂತರ ಅಹ್ಮದಾಬಾದ್‌ನಲ್ಲಿ ಆರೆಸ್ಸೆಸ್ ಕಚೇರಿಯ ಬಳಿಯೇ ಇದ್ದ ಸೋದರಮಾವನ ಅಂಗಡಿಯಲ್ಲಿ ಟೀ ಹಾಕುತ್ತಿದ್ದ ಮೋದಿ, ಅಲ್ಲಿಗೆ ಬರುತ್ತಿದ್ದ ಸಂಘಪರಿವಾರದವರ ಮಾತುಗಳಿಂದ ಪ್ರಭಾವಿತರಾದರು. ವಕೀಲ್‌ಸಾಬ್ ಅಂತಲೇ ಖ್ಯಾತರಾಗಿದ್ದ ಹಿರಿಯ ಆರೆಸ್ಸೆಸಿಗ ಲಕ್ಷ್ಮಣ್‌ರಾವ್ ಇನಾಂದಾರ್ ಈ ಯುವಕನಲ್ಲಿದ್ದ ಕಿಡಿ ಗುರುತಿಸಿ, ತಮ್ಮೊಂದಿಗೆ ಕರೆದುಕೊಂಡಿದ್ದೇ ಟರ್ನಿಂಗ್ ಪಾಯಿಂಟ್ ಆಗಿ ಹೋಯ್ತು. 1970ರ ಹೊತ್ತಿಗೆ ಅರೆಸ್ಸೆಸ್ ಪ್ರಚಾರಕನಾಗಿ ಮೋದಿ ಮುಂಚೂಣಿಯಲ್ಲಿ ನಿಂತಾಯಿತು.
ಗುರುವಾಗಿ ಬಂದ ಆಡ್ವಾಣಿ
ತುರ್ತು ಪರಿಸ್ಥಿತಿಯ ಹೊತ್ತಿನಲ್ಲಿ ಆಡ್ವಾಣಿಯವರ ಬೆಂಕಿ ಉಗುಳುವ ವ್ಯಕ್ತಿತ್ವ ನೋಡಿದ್ದ ಮೋದಿ ಇವರೇ ನನ್ನ ಗುರು ಎಂದು ಮನಸಲ್ಲೇ ನಿರ್ಧರಿಸುತ್ತಿದ್ದರೆ, ಇತ್ತ ಆಡ್ವಾಣಿ ನರೇಂದ್ರ ಮೋದಿ ಎಂಬ ಯುವಕನ ಮಾತುಗಾರಿಕೆ, ಜನ ಒಗ್ಗೂಡಿಸುವ ತಂತ್ರಗಾರಿಕೆ, ನಾಯಕತ್ವ ಗುಣ ಗಮನಿಸಿ, ಈತ ಈಗ ಸಕ್ರಿಯ ರಾಜಕೀಯಕ್ಕೆ ಬರಲು ಪಕ್ವ ಎಂದೆನಿಸಿ ತಮ್ಮತ್ತ ಎಳೆದುಕೊಂಡರು.
ಆಗಲೇ ಮೋದಿ, ಆಡ್ವಾಣಿಗೆ ಗಾಂಧಿನಗರದಿಂದ ಲೋಕಸಭೆಗೆ ಸ್ಪರ್ಧಿಸಲು ಸಲಹೆ ನೀಡಿದ್ದರು ಹಾಗೂ ಆಡ್ವಾಣಿ ಆ ಮಾತನ್ನು ಪಾಲಿಸಿದ್ದರು. ಗುರುವಾಗಿ ಬಂದವರು ಶಿಷ್ಯನ ಮಾತು ಕೇಳಿ ಅದರಲ್ಲಿ ಯಶಸ್ಸು ಪಡೆದದ್ದು ಇತಿಹಾಸ ಈಗ. ಆ ಮೂಲಕ ಮೋದಿ ತಮ್ಮ ವಿರೋಧಿ ಶಂಕರ ಸಿಂಗ್ ವಘೇಲರನ್ನು ನೆಲಸಮ ಮಾಡಿ ಹಾಕಿದ್ದರು.
ಇಲ್ಲಿಂದ ಮುಂದೆ ಮುಟ್ಟಿದ್ದೆಲ್ಲ ಚಿನ್ನ
ಆಡ್ವಾಣಿಯ ರಥಯಾತ್ರೆಗೆ ಸಾರಥಿಯಾದ ಮೋದಿ, ಒಂದೆಡೆ ಗುಜರಾತಿನಲ್ಲಿ ಬಿಜೆಪಿಯನ್ನು ಸ್ಥಾಪನೆಗೊಳಿಸಿದರೆ, ಮತ್ತೊಂದಡೆ ದೇಶಾದ್ಯಂತ ಬಿಜೆಪಿಗೆ ನೆಲೆ ದೊರಕಿಸತೊಡಗಿದರು. ಪಂಜಾಬ್, ಹರಿಯಾಣ, ಚಂಡೀಗಢ ಎಲ್ಲೆಡೆ ಬೆರಳೆಣಿಕೆಗಿಂತ ಕಮ್ಮಿ ಇದ್ದ ಬಿಜೆಪಿಯನ್ನು ಎರಡಂಕಿಗೆ ಏರಿಸಿದ್ದು ಮೋದಿಯ ಚಾಕಚಕ್ಯತೆ. ಗುಜರಾತಿನಲ್ಲಿ ಕೇಶುಭಾಯ್ ಪಟೇಲ್ ವಿರೋಧ ಸಹಿಸದೆ ಪಂಜಾಬಿನಲ್ಲಿ ನೆಲೆಸಿದ್ದ ಮೋದಿಗೆ ಆಗ ವಾಜಪೇಯಿ ಮೋದಿಯನ್ನು ಕರೆದು ಹೇಳಿದ್ದು ಹೀಗೆ; 'ಪಂಜಾಬಿ ಊಟ ತಿಂದು ತುಂಬಾ ತೂಕ ಆಗಿದೀಯ. ಗುಜರಾತಿ ಫುಡ್ ತಿನ್ನೋ ಟೈಮ್ ಇದು. ನೀನು ಅಲ್ಲಿಗೆ ಹೋಗು'. ಮೋದಿ ತಕ್ಷಣ ವಾಜಪೇಯಿ ಮಾತಿನಂತೆ ಗುಜರಾತ್‌ಗೆ ಬಂದು ಕೇಶು ಭಾಯ್ ಅವರಿಂದ ಅಧಿಕಾರ ಹಸ್ತಾಂತರ ಮಾಡಿಕೊಂಡರು.
ಅಲ್ಲಿಂದ ಮುಂದೆ ನಡೆದದ್ದು ಒಳಗಿನ ಶತ್ರುಗಳ ಸಂಹಾರ ಅಂದರೆ ತಪ್ಪಲ್ಲ. ತಮ್ಮೆಲ್ಲ ವಿರೋಧಿಗಳನ್ನು ಬಗ್ಗುಬಡಿದ ಮೋದಿ, ಏಕಮೇವಾದ್ವಿತೀಯ ಆಗಿಬಿಟ್ಟರು. ಅವರ ಖದರನ್ನು ತಡೆಯಲಾರದೆ ಐಎಎಸ್ ಅಧಿಕಾರಿಗಳು ಕೂಡ ಅಲ್ಲಿಂದ ಒತ್ತಾಯದ ಮೇರೆಗೆ ವರ್ಗಾವಣೆ ತೆಗೆದುಕೊಂಡರು.
ಕುಟುಂಬ ರಾಜಕಾರಣಕ್ಕೆ ನೋ ನೋ
ನಾಲ್ಕು ಜನ ಅಣ್ಣ ತಮ್ಮಂದಿರು, ಒಬ್ಬ ತಂಗಿ ಇದ್ದರೂ ಮೋದಿ, ಅಧಿಕಾರದ ಚುಕ್ಕಾಣಿ ಹಿಡಿದಾಗ ಯಾರನ್ನೂ ಹತ್ತಿರಕ್ಕೂ ಸೇರಿಸಲಿಲ್ಲ. 2001ರಲ್ಲಿ ಮೋದಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸ್ತಾ ಇರುವಾಗ, ತಾಯಿ ಹೀರಾಬೆನ್, ಜನಜಂಗುಳಿಯ ಮಧ್ಯ ನುಸುಳಿ ದೂರದಿಂದ ಮಗನನ್ನು ನೋಡಲು ಒದ್ದಾಡುತ್ತಿದ್ದರಂತೆ. ಯಾರ ಮೂಲಕವೋ ಇವರು ಮೋದಿಯ ತಾಯಿ ಎಂದು ಗೊತ್ತಾದ ನಂತರ ಕಾರ್ಯಕರ್ತರೊಬ್ಬರು ಅವರನ್ನು ವಿವಿಐಪಿ ಸೀಟಿನಲ್ಲಿ ಕರೆತಂದು ಕೂರಿಸಿದರಂತೆ. ಇದು ನಿಜ ಘಟನೆ. ಹಾಗೆಯೇ ಮಹತ್ತರ ಮೀಟಿಂಗ್ ಒಂದಕ್ಕೆ ಅಧಿಕಾರಿಯೊಬ್ಬರು, ಶಿಫಾರಸು ಮಾಡಿಸಿಕೊಳ್ಳುವ ಆಸೆಯಿಂದ ಮೋದಿ ಸೋದರನನ್ನು ಜೊತೆಗೆ ಕರೆದುಕೊಂಡು ಬಂದಿದ್ದಾಗ, ಇಬ್ಬರನ್ನೂ ಹೊರಗಟ್ಟಿದ ಘಟನೆಯೂ ವಿಶೇಷ.
ಪ್ರಧಾನಿ ಕ್ಯಾಂಡಿಡೇಟ್ ಮೋದಿ
ಗುಜರಾತ್ ಇಡೀ ದೇಶಕ್ಕೆ ಮಾದರಿ ರಾಜ್ಯವಾಗಿ ಕಾಣುತ್ತಿದ್ದರೆ, ಮೋದಿ ಅವಿರೋಧವಾಗಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಆಗಿಬಿಟ್ಟರು. ಗುರು ಆಡ್ವಾಣಿಯನ್ನು ಮೀರಿಸಿ ಬೆಳೆದು, ಅವರನ್ನೇ ನಿರ್ಲಕ್ಷಿಸಿದರು ಎಂಬ ಮಾತಿನ ನಡುವೆ, ಆಡ್ವಾಣಿ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದು ಸುದ್ದಿಯಾದರೂ, ಚುನಾವಣೆ ಹತ್ತಿರವಾದಂತೆ, ಶಿಷ್ಯನನ್ನು ಬೆಂಬಲಿಸಿ ದೊಡ್ಡವರಾದ ಆಡ್ವಾಣಿ, ಮೋದಿಯನ್ನು ತಮ್ಮ ಉತ್ತರಾಧಿಕಾರಿ ಎಂದು ಬಹಿರಂಗವಾಗಿ ಘೋಷಿಸಿಬಿಟ್ಟರು. ಒಂದೆಡೆ ತಮ್ಮ ಸೀನಿಯರ್ ಲೀಡರ್‌ಗಳನ್ನು ಓವರ್ ಟೇಕ್ ಮಾಡಿ ಬದಿಗೊತ್ತಿದ ಮೋದಿ, ಇನ್ನೊಂದೆಡೆ ಜೂನಿಯರ್‌ಗಳನ್ನು ತಮ್ಮ ಮಟ್ಟಕ್ಕೆ ಬೆಳೆಯದಂತೆ ಜಾಗ್ರತೆ ವಹಿಸಿದರು. ವಿಹೆಚ್‌ಪಿ ಥರದ ಸಂಘಟನೆಗಳೂ ತಮ್ಮನ್ನು ಮೀರಿ ನಡೆಯದಂತೆ ತಮ್ಮ ತಂತ್ರಗಾರಿಕೆಯಿಂದ ಕಡಿವಾಣ ಹಾಕಿದ ಮೋದಿ ಆ ಮೂಲಕ ತಮ್ಮ ನಿರಂಕುಶ ಪ್ರಭುತ್ವವನ್ನು ಮೆರೆದರು.ಚುನಾವಣೆ ಗೆಲ್ಲುವುದಾದರೆ ಅದು ತಮ್ಮ ನಾಮಬಲ ಒಂದರಿಂದಲೇ ಎನ್ನುವಷ್ಟರ ಮಟ್ಟಿಗೆ ತಮ್ಮ ಅಲೆ ಸೃಷ್ಟಿಸಿದ ಮೋದಿ ಅದನ್ನು ಕೇವಲ ಮಾಧ್ಯಮದ ಸೃಷ್ಟಿಯೆಂದೋ, ಪ್ರಚಾರದ ಭರಾಟೆ ಎಂದೋ ಆಗಿ ಹೋಗಲು ಬಿಡದೆ, ದೇಶವನ್ನು ಇಂಚಿಂಚೂ ಬಿಡದೆ ಸುತ್ತಿ ಜನತೆಯನ್ನು ಸಮ್ಮೋಹಿನಿಗೆ ಒಳಪಡಿಸಿಬಿಟ್ಟರು.
ಮುಂದೆ ನಡೆದದ್ದು ಈಗಾಗಲೇ ಇತಿಹಾಸ.
ಇದು ಮೋದಿ ಸರ್ಕಾರ್ ಆಗುವ ಮೊದಲ ಛೋಟಾ ಸರ್ಕಾರ್‌ನ ವೃತ್ತಾಂತ !
ಲವ್ ವಿಥ್ ಜಶೋದಾ ಬೆನ್
ಹದಿನೇಳನೇ ವಯಸ್ಸಲ್ಲೇ ಜಶೋಧಬೆನ್ ಮೇಲಿನ ಪ್ರೀತಿಯಿಂದ ಅಪ್ಪ ಅಮ್ಮನ ವಿರೋಧ ಕಟ್ಟಿಕೊಂಡು ಮನೆ ತೊರೆದಿದ್ದರಂತೆ ಮೋದಿ. ಮನೆಯವರು ಸುತಾರಾಂ ಒಪ್ಪದ ಅವರ ಮದುವೆ ಪ್ರಸ್ತಾಪವನ್ನು, ಮೋದಿ ತೀರಾ ಮೊನ್ನೆಯ ತನಕ ಬಹಿರಂಗಗೊಳಿಸಲು ಆಗಿರಲೇ ಇಲ್ಲ. ಆದರೆ ಅವರು ಇನ್ನೊಂದು ಮದುವೆಯತ್ತ ನಡೆಯದೆ ಬ್ರಹ್ಮಚರ್ಯದಲ್ಲೇ ಉಳಿದರು. ಪದೇಪದೆ ರಾಜಕೀಯ ವಿರೋಧಗಳ ನಡುವೆ ಈ ವೈಯಕ್ತಿಕ ವಿಚಾರ ಬಂದರೂ ಅದನ್ನು ನಿರ್ಲಕ್ಷಿಸುತ್ತಿದ್ದ ಮೋದಿ ಈ ಬಾರಿಯ ಎಲೆಕ್ಷನ್‌ಗೆ ಮುನ್ನ ಜಶೋದಾ ಬೆನ್‌ರನ್ನು ಬಹಿರಂಗವಾಗಿ ತಮ್ಮ ಪತ್ನಿಯೆಂದು ಒಪ್ಪಿಕೊಂಡು ವಿರೋಧಿಗಳ ಬಾಯಿಮುಚ್ಚಿಸಿದರು.
ಕಬಡ್ಡಿ
ಮ್ಯಾನ್ ಆಫ್ ದಿ ಮ್ಯಾಚ್ 'ನರೇಂದ್ರ'
1960ರ ಮಾತು. ಅದು ವಾರ್ಷಿಕ ಕ್ರೀಡಾಕೂಟ. ವಾಡ್‌ನಗರ್‌ನ ಕುಮಾರಶಾಲಾದ ಪ್ರೈಮರಿ ಸ್ಕೂಲ್ ಹುಡುಗ್ರು ಎಲ್ಲ ಚಿಳ್ಳೆಮಿಳ್ಳೆ ತಂಡಗಳನ್ನು ಸೋಲಿಸಿ ಅಚ್ಚರಿ ಎಂಬಂತೆ ಕಬಡ್ಡಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದರು. ಆದರೆ ಅವರು ಎದುರಿಸಬೇಕಿದ್ದದ್ದು ಅಂದಿನ ತನಕ ಅಜೇಯ ಅನಿಸಿದ್ದ ಚಾಂಪಿಯನ್ ತಂಡವನ್ನು! ಆದರೆ ಪವಾಡ ಎಂಬಂತೆ ಪ್ರೈಮರಿ ಸ್ಕೂಲ್ ಮಕ್ಕಳು ತಮಗಿಂತ ದೊಡ್ಡವರು ಹಾಗೂ ಪಂಟರ್‌ಗಳನ್ನು ಫೈನಲ್‌ನಲ್ಲಿ ಮಣ್ಣುಮುಕ್ಕಿಸಿ ಕಪ್ ಎತ್ತಿ ಹಿಡಿದರು. ಆ ಗೆಲುವಿಗೆ ಕಾರಣ ಆದವನ ಹೆಸರು ನರೇಂದ್ರ ದಾಮೋದರ್‌ದಾಸ್ ಮೋದಿ. ಕಬಡ್ಡಿ ಕೋಚ್ ಕಾನು ಭಾವಸಾರ್ ಪ್ರಕಾರ, ನರೇಂದ್ರನ ನಾಯಕತ್ವದ ಗುಣಗಳು ಪಂದ್ಯವನ್ನು ಗೆಲ್ಲಿಸಿದ್ದವು. ಅದೇ ನರೇಂದ್ರನ ನಾಯಕತ್ವ ಗುಣ ಇವತ್ತು ಬಿಜೆಪಿಯನ್ನು ಗೆಲ್ಲಿಸಿದೆ. ಭಾರತವನ್ನು ಗೆಲ್ಲಿಸಿದೆ!
ಬಹುಶಃ ಮೋದಿಗೆ ಅದು ಗೆಲುವಿನ ಆರಂಭ. ಅಲ್ಲಿಂದ ಮುಂದೆ ಮೋದಿಗೆ ಗೆಲ್ಲೋದು ಒಂಥರಾ ರೊಟೀನ್ ಎಂಬಂತೆ ಆಗಿ ಹೋಯ್ತು.
-ನವೀನ್ ಸಾಗರ್
naveen2709@gmail.com