ಕೆಲವು ವರ್ಷಗಳ ಹಿಂದೆ ಮೋದಿಜಿ ಶಿವಮೊಗ್ಗಕ್ಕೆ ಬಂದಿದ್ದಾಗ ಎಲೆಕ್ಷನ್ ಕ್ಯಾಂಪೇನ್‌ನಲ್ಲಿ ಗುಜರಾತನ್ನು ಹೇಗೆ ಮುಂದೆ ತರುತ್ತಿದ್ದೀನಿ ಎಂದು ತಿಳಿಸುತ್ತಾ, ನರ್ಮದಾ ಪೈಪ್‌ಲೈನ್‌ನ ಸೈಜ್ ಎಷ್ಟು ದೊಡ್ಡದಿದೆ ಅಂದ್ರೆ ಅದರೊಳಗೆ ಧರ್ಮಸಿಂಗ್‌ಜೀ ಅವರು ಫ್ಯಾಮಿಲಿ ಜೊತೆ ಕಾರ್‌ನಲ್ಲಿ ರೌಂಡ್ ಹೊಡೀಬಹುದಂತ ಹೇಳಿದ್ದು ಇನ್ನೂ ನೆನಪಿದೆ. ಸಭೆಯಲ್ಲಿ ಕುಳಿತ ನನಗೆ ಮೋದಿ ಹೇಳುವ ಮಾತಿನಲ್ಲಿ ಬೇರೆ ರಾಜಕೀಯ ವ್ಯಕ್ತಿಗಳ ರೀತಿ ಸುಳ್ಳಿಲ್ಲ, ಇದೆಲ್ಲ ಅಕ್ಷರಶಃ ಸತ್ಯ. ನಾನೇ ಪ್ರತ್ಯಕ್ಷದರ್ಶಿ ಇದ್ದೇನೆ ಎಂದು ಮೈಕ್‌ನಲ್ಲಿ ಕೂಗಿ ಹೇಳುವ ಮನಸ್ಸಾಗುತ್ತಿತ್ತು.
ಈ ದಿನ ನಮೋ ಬಗ್ಗೆ ಆರ್ಟಿಕಲ್ ಬರೆದು ಕಳಿಸು ಎಂದು ನನ್ನ ತಂಗಿ ಫೋನ್ ಮಾಡಿ ಹೇಳಿದಾಗ ನನ್ನ ಪುಣ್ಯವೇ ಅನಿಸಿ ಈ ಕಾರ್ಯಕ್ಕೆ ಕೈ ಹಾಕ್ತಾ ಇದೀನಿ.
ಮೋದಿ ಈ ರಾಜ್ಯಕ್ಕೆ ಕಾಲಿಡುವ ಮೊದಲೇ ಅಂದರೆ 22 ವರ್ಷಗಳಿಂದ ಅಹ್ಮದಾಬಾದ್‌ನಲ್ಲಿ ಸೆಟಲ್ ಆಗಿರುವ ನಾನು ಗುಜರಾತ್ ಹೇಗೆ ದಿನದಿಂದ ದಿನಕ್ಕೆ ಪ್ರಗತಿ ಆಗುತ್ತಾ ಬಂದಿದೆ ಎಂದು ನೋಡುತ್ತಾ ಬಂದವಳು. ಬಂದ ಹೊಸತರಲ್ಲಿ ಪುರಿ ಜಗನ್ನಾಥ ಮಂದಿರದ ರಥೋತ್ಸವ ಇಲ್ಲಿ ನಡೆಯುವ ದಿನ ಗಲಾಟೆ ಆಗುವುದೆಂದು ಆ ದಿನ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿತ್ತು. ಆದರೆ ಈಗ ಆ ಗಲಾಟೆಯೇ ಮಾಯವಾಗಿದೆ. 2001ರಲ್ಲಿ ಜರುಗಿದ ಭಾರಿ ಭೂಕಂಪದಲ್ಲಿ ತತ್ತರಿಸಿದ ಜನಗಳಿಗೆ ಧೈರ್ಯ ನೀಡಿ ಮತ್ತೆ ಭುಜ್ ಸಿಟಿಯನ್ನು ನಿರ್ಮಿಸಿದ ರೀತಿಯಂತೂ ಶ್ಲಾಘನೀಯ. ನಂತರ ಜರುಗಿದ ಕೋಮುಗಲಭೆಯ ಸಮಯದಲ್ಲೂ ನಾಲ್ಕು ಏರಿಯಾ ಹೊರತುಪಡಿಸಿದರೆ ಉಳಿದೆಲ್ಲ ಕಡೆ ಜನ ಭಯರಹಿತರಾಗಿ ಜೀವನ ನಡೆಸುತ್ತಿದ್ದರು. ಗುಜರಾತ್‌ನ ಶೇ. 70 ಭಾಗವನ್ನು ಸುತ್ತಿದ ನಾನು ಹಳ್ಳಿಹಳ್ಳಿಯ ರಸ್ತೆಯನ್ನು ನೋಡಿ ದಂಗಾಗಿದ್ದೇನೆ. ಇಷ್ಟೆಲ್ಲ ಪ್ರಗತಿ ಸಾಧ್ಯವೇ ಅನಿಸುತ್ತದೆ. ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು 18ನೇ ವಯಸ್ಸಿನಲ್ಲಿ ಪ್ರಥಮ ಬಾರಿಗೆ ಬೆಂಗಳೂರನ್ನು ನೋಡಿದ ನಾನು ಒಂದು ಹೊರರಾಜ್ಯವನ್ನು ನನ್ನ ರಾಜ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಮೋದಿಯೇ ಕಾರಣ.
ಇಲ್ಲಿ ಸಾರಾಯಿ ಅಂಗಡಿಯಾಗಲೀ, ಮಾಂಸದ ಅಂಗಡಿಯಾಗಲೀ ಇಲ್ಲ. ಸುತ್ತಮುತ್ತಲೂ ಹಸಿರು, 47 ಡಿಗ್ರಿ ತಾಪಮಾನದಲ್ಲೂ 24/7 ಸಮಯದಲ್ಲೂ ಸಿಗುವ ನೀರು, ವಿದ್ಯುತ್, ಮಧ್ಯರಾತ್ರಿ 12 ಗಂಟೆಯಲ್ಲೂ ಹೆಣ್ಣುಮಕ್ಕಳು ಓಡಾಡುವ ಸ್ವತಂತ್ರ- ಎಲ್ಲವನ್ನೂ ನೋಡುತ್ತಿದ್ದರೆ ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗುವ ಕಾಲ ಹತ್ತಿರದಲ್ಲಿದೆ ಎನ್ನಿಸದಿರದು. ಸಾಫ್ಟ್‌ವೇರ್ ಕಂಪನಿಯ ಬೆಳವಣಿಗೆಗಾಗಿ ಅವರು ಬೆಳೆಸುತ್ತಿರುವ 'ಗಿಫ್ಟ್‌ಸಿಟಿ'ಯನ್ನೊಮ್ಮೆ ನೋಡಬೇಕು ನೀವು.
ದೆಹಲಿಯಲ್ಲೂ ಸಕ್ಸಸ್ ಆಗದಿರುವ ಬಿಎಸ್‌ಆರ್‌ಟಿಎಸ್ ಸಿಟಿ ಬಸ್ ಸೌಲಭ್ಯ ಮೋದಿಯ ಟೋಪಿಗೊಂದು ಗರಿಯನ್ನು ಸೇರಿಸಿದೆ. 4 ಲೇನ್‌ಗಳ ಮಧ್ಯ ಬಸ್ಸಿಗಾಗಿಯೇ ಇರುವ ಪ್ರತ್ಯೇಕ ಮಾರ್ಗ, ಅದೂ ಹಸಿರು ಗಿಡಮರಗಳ ಮಧ್ಯ. ಹೀಗಾಗಿ ಟ್ರಾಫಿಕ್‌ನಿಂದ ಪಾರಾಗಲು, ಸಮಯ ಉಳಿಸಲು ಸಾವಿರಾರು ಜನ ತಮ್ಮ ವೆಹಿಕಲ್ ಅನ್ನು ಮನೆಯಲ್ಲೇ ಬಿಟ್ಟು ಬಿಎಸ್‌ಆರ್‌ಟಿಎಸ್ ಬಸ್ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ. ಹಳ್ಳಿಹಳ್ಳಿಯಲ್ಲಿ ಅವರು ಬಡವರಿಗಾಗಿ ಕಟ್ಟಿದ ಮನೆಯ ಕಾಲು ಭಾಗವನ್ನೂ ಮೀಡಿಯಾದವರು ಹೇಳಿಲ್ಲ ಎಂಬುದು ಬೇಸರದ ಸಂಗತಿ. ಹೆಣ್ಣುಮಕ್ಕಳಿಗೆ ಫೀಸ್ ಇಲ್ಲದ ಶಿಕ್ಷಣ, ವೈದ್ಯಕೀಯ ಶಿಕ್ಷಣದಲ್ಲೂ ಹೆಣ್ಣುಮಕ್ಕಳಿಗೆ ಫೀಸ್‌ನಲ್ಲಿ ರಿಯಾಯಿತಿ ರಾಜ್ಯದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದೆ.
'ಕುಂಭಮೇಳ' ಎಂಬ ಕಾರ್ಯಕ್ರಮದ ಮೂಲಕ ಎಲ್ಲ ಬಗೆಯ ಆಟಗಳಿಗೂ ಅವಕಾಶ ಒದಗಿಸಲಾಗಿದೆ. ಬಡವರು ಸೋಮಾರಿಗಳಾಗಬಾರದು ಎಂಬ ಕಾರಣಕ್ಕೆ ಯಾವುದೇ ಫೀಲ್ಡ್‌ನಲ್ಲಿ ಮೊದಲು ಟ್ರೈನಿಂಗ್, ನಂತರ ಅಟೆಂಡೆನ್ಸ್. ತದನಂತರ ಪರೀಕ್ಷೆ ನಡೆಸಿ ಪಾಸ್ ಆದವರಿಗೆ ಮಾತ್ರ ಹೊಲಿಗೆ ಯಂತ್ರ, ಪಾರ್ಲರ್ ಕಿಟ್‌ನಂಥ ಸೌಲಭ್ಯ. ಇದು ಪ್ರತಿ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಹುಟ್ಟು ಹಾಕಿ, ಗುಣಾತ್ಮಕತೆಯನ್ನು ಹೆಚ್ಚಿಸಿದೆ. ಯಾವುದೇ ಸಂತಮಹಾತ್ಮರ ಸತ್ಸಂಗದಲ್ಲಿ ಬಂದು ಗೌರವ ಸಲ್ಲಿಸಿ ಅವರು ಕುಳಿತುಕೊಳ್ಳುವ ಶೈಲಿ, ಅವರ ಧಾರ್ಮಿಕ ಮನೋಭಾವನೆಯನ್ನು ಪ್ರತಿಬಿಂಬಿಸುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಮೋದಿಯವರ 'ಸಾಕ್ಷಿಭಾವ' ಪುಸ್ತಕದಲ್ಲೂ ಅವರು 30 ವರ್ಷಗಳ ಹಿಂದೆ ದೇಶದ ಈಗಿನ ಸ್ಥಿತಿಗಾಗಿ ದೇವಿಯಲ್ಲಿ ಮೊರೆ ಇಟ್ಟಿದ್ದಾರೆ.
ಗುಜರಾತ್ ಒಂದೇ ಬೆಳೆದರೆ ಸಾಲದು, ಇಡೀ ದೇಶ ಗುಜರಾತ್ ಆಗಬೇಕೆನ್ನುವ ಒಂದೇ ಆಸೆಯಿಂದ ಮೋದಿಯನ್ನು ಮನಸ್ಸಿಲ್ಲದೆ ಬೀಳ್ಕೊಟ್ಟಿದ್ದೇವೆ. ನಮ್ಮೆಲ್ಲರ ಕನಸು ನನಸು ಮಾಡುವ ಶಕ್ತಿ ಆ ದೇವರು ಮೋದಿಯವರಿಗೆ ಕೊಡಲಿ ಎಂದು ಹಾರೈಸುತ್ತಾ...
-ನಿವೇದಿತಾ ಸತೀಶ್, ಅಹ್ಮದಾಬಾದ್
amruthavarshinis@yahoo.in