63 ವರ್ಷದ ನರೇಂದ್ರ ಮೋದಿ ಯುವಕರ ಕಣ್ಮಣಿಯಾಗುತ್ತಾರೆ, ಆದರೆ ಅದೇ 43 ವರ್ಷದ ರಾಹುಲ್ ಗಾಂಧಿಯನ್ನು ಮುದುಕರೂ ಒಪ್ಪಿಕೊಳ್ಳುವುದಿಲ್ಲ. ದೇಶದ ಯುವಜನತೆ ಈ ಮುದುಕನ ಮೇಲೆ ಕನಸಿನ ಸೌಧ ಕಟ್ಟಿಕೊಂಡೇ ಮತಗಟ್ಟೆಯಲ್ಲಿ ಸಾಲು ನಿಂತು ಹಕ್ಕು ಚಲಾಯಿಸಿದ್ದರಿಂದಲೇ ಇಂದು ಮೋದಿ ಪ್ರಧಾನಿ ಸ್ಥಾನದಲ್ಲಿ ಅಲಂಕರಿಸಲು ಕಾರಣವಾಗಿದೆ.
ಯುವಜನರಲ್ಲಿ ಈ ಮೋದಿಯ ಮೋಡಿ ಆವರಿಸಿದ್ದರೆ ಅದಕ್ಕೆ ಗುಜರಾತ್ ಅಭಿವೃದ್ಧಿ ಮಾತ್ರ ಕಾರಣವಲ್ಲ, ರೋಮಾಂಚನಕಾರಿ ಮಾತುಗಳೂ ಈ ಹುದ್ದೆಗೆ ತಂದಿಲ್ಲ. ಸುಖಾಸುಮ್ಮನೇ ಈ ದೇಶದಲ್ಲಿ ನಮೋ ಎಂಬ ಬ್ರಾಂಡ್ ಹುಟ್ಟಿಕೊಂಡಿಲ್ಲ. ಇಳಿ ವಯಸ್ಸಿನ ಮೋದಿಯಲ್ಲಿ ಯುವ ಮನಸ್ಸೊಂದಿದೆ. ನಾವು 20-30 ವರ್ಷದವರು ವರ್ತಿಸುವಂತೆ ಮೋದಿ ಪಬ್ಲಿಕ್ ಅಪೀಯರನ್ಸ್ ಇರಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ನಾವು ಪ್ರೀತಿಸುವ ಟ್ವೀಟರ್, ಫೇಸ್ಬುಕ್, ಯೂಟ್ಯೂಬ್ನಲ್ಲಿ ಮೋದಿ ಸಿಗುತ್ತಾರೆ. ನಮ್ಮಂತೆಯೇ ಸ್ಮಾರ್ಟ್ಫೋನ್ನಲ್ಲಿ 'ಸೆಲ್ಫಿ' ತೆಗೆದುಕೊಂಡು ಮತ ಚಲಾಯಿಸಿರುವುದನ್ನು ಫೇಸ್ಬುಕ್ ಹಾಗೂ ಟ್ವೀಟರ್ನಲ್ಲಿ ಕೂಡಲೇ ಹೇಳಿಕೊಳ್ಳುತ್ತಾರೆ. ತಾನು ಕೂಡ ನಿಮ್ಮಂತೆಯೇ ಒಂದು ನಿರ್ದಿಷ್ಟ ಬ್ರಾಂಡ್ನ ಸ್ಮಾರ್ಟ್ಫೋನ್ ಅನ್ನು ಬಳಸುವುದು ಎಂಬುದನ್ನು ಉದ್ದೇಶಪೂರ್ವಕವಾಗಿ ಕ್ಯಾಮೆರಾಕ್ಕೆ ಪೋಸ್ ನೀಡುತ್ತಾರೆ. ಮೋದಿಯ ಇದ್ಯಾವುದೇ ನಡೆಗಳು ಸ್ವಾಭಾವಿಕವೂ ಅಲ್ಲ, ಜತೆಗೆ ಪ್ರಚಾರಕ್ಕೆ ಸೀಮಿತವಲ್ಲ.
ಮೋದಿಯನ್ನು ಮುದುಕ ಎಂದರೆ ಬೈಯುವ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಏಕೆಂದರೆ 63 ವಯಸ್ಸಿನ ವ್ಯಕ್ತಿಯನ್ನು ಮುದುಕ ಎನ್ನಲಾಗದಷ್ಟು ಯುವ ಮನಸ್ಸನ್ನು ಮೋದಿ ಹೊಂದಿದ್ದಾರೆ. ಇಂಥದ್ದೊಂದು ನಂಬಿಕೆ ಹುಟ್ಟಿಸಲು ಕಾರಣವಾಗಿದ್ದು ತಂತ್ರಜ್ಞಾನದ ಮೇಲೆ ಮೋದಿಗಿರುವ ಪ್ರೀತಿ.
ನಾವೆಷ್ಟೇ ಬಡಿದುಕೊಂಡರೂ ಯುವಜನತೆ ಟಿವಿ ಹಾಗೂ ಮುದ್ರಣ ಮಾಧ್ಯಮದಿಂದ ದೂರ ಸರಿದುಬಿಟ್ಟಿದೆ. ಭಾರತದ ಯುವಕೋಟಿಯನ್ನು ತಲುಪಲು ಇಂದು ಇರುವ ಏಕೈಕ ಮಾರ್ಗವೆಂದರೇ ಸಾಮಾಜಿಕ ತಾಣ. ಇದನ್ನೇ ಬಂಡವಾಳವಾಗಿರಿಸಿಕೊಂಡ ಮೋದಿ ನಿತ್ಯ ಸಾಮಾಜಿಕ ತಾಣಗಳ ಮೂಲಕ 50 ಲಕ್ಷಕ್ಕೂ ಅದಿಕ ಜನರನ್ನು ತಲುಪುತ್ತಾರೆ.
ರಾಹುಲ್ ಗಾಂಧಿಯ ಒಂದು ಹೇಳಿಕೆಗಾಗಿ ಮಾಧ್ಯದವರು ದಿನರಾತ್ರಿ ಓಡುತ್ತಾರೆ. ಅವರು ನೀಡುವ ಒಂದು ಸಾಲಿನ ಹೇಳಿಕೆಗೆ ತಿಂಗಳುಗಟ್ಟಲೇ ಕಾಯಬೇಕಾಗುತ್ತದೆ. ಈ ದೇಶದ ಸಮಸ್ಯೆ ಕುರಿತಂತೆ ರಾಹುಲ್ ವಾದವೇನು ಎಂಬ ವಿಚಾರ ತಿಳಿಯಲು ಸಂವತ್ಸರವೇ ಬೇಕಾಗುತದೆ. ಆದರೆ, ಇದೇ ಮೋದಿ ಮಾಧ್ಯಮದ ಹಿಂದೂ ಬೀಳಲ್ಲ, ತನ್ನ ಹಿಂದೇ ಬೀಳುವ ಮಾಧ್ಯಮಗಳಿಗೂ ಕೈಗೆ ಸಿಗುವುದಿಲ್ಲ. ಆದರೆ ದೇಶದ ಜನತೆ ಒಂದು ವಿಚಾರದ ಬಗ್ಗೆ ತಲೆಕೆಡಿಸಿಕೊಂಡಾಗ ಟ್ವೀಟಿಸುತ್ತಾರೆ. ಆ ಮೂಲಕ ಮಾಧ್ಯಮದೆದುರು ಬರದೇ ಬ್ರೇಕಿಂಗ್ ನ್ಯೂಸ್ನಲ್ಲಿ ಎಲ್ಲರಿಗಿಂತ ಹೆಚ್ಚು ರಾರಾಜಿಸುತ್ತಾರೆ. ಮೋದಿಯ 'ಗೆಜೆಟ್ ಮಂಡನೆ' ಕೇವಲ ಸಾಮಾಜಿಕ ತಾಣಗಳಿಗೆ ಸೀಮಿತವಲ್ಲ. 3-ಡಿ, ಸ್ಮಾರ್ಟ್ಫೋನ್, ಪೆನ್ಡ್ರೈವ್, ರಿಸ್ಟ್ ಬ್ಯಾಂಡ್, ವಿಡಿಯೋ ಗೇಮ್, ಮೊಬೈಲ್ ಅಪ್ಲಿಕೇಷನ್ಗಳಲ್ಲೂ ಬ್ರಾಂಡ್ ಮೋದಿ ಮೋಡಿ ಮಾಡಿದೆ.
ಕೆಲ ತಿಂಗಳ ಹಿಂದೆ ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ಮೋದಿಯ 3-ಡಿ ಭಾಷಣವಿತ್ತು. ಅದರ ವರದಿಗಾಗಿ ನಾನು ಹೋಗಿದ್ದೆ. ಅಲ್ಲಿ ಒಂದೈದು ಸಾವಿರದ ಜನ ಸಮೂಹವಿರಬಹುದು. ಅಲ್ಲಿಂದ ಹೊರಹೋಗಲು ಇರುವ ಮಾರ್ಗ ಒಂದೇ ಇರುವುದರಿಂದ ಸಂಪೂರ್ಣ ಮೈದಾನ ಖಾಲಿಯಾಗುವವರೆಗೆ ಗೇಟ್ ಕಾಯುವ ಕೆಲಸ ಮಾಡಿದೆ. ಅಲ್ಲಿ ಕೇಳಿಬಂದ ಮಾತುಗಳು ಹೀಗಿದ್ದವು, 'ಎಂಥ ಅದ್ಭುತ ನೋಡಿ. ದೆಹಲಿಯಲ್ಲಿ ಕುಳಿತು ನಮ್ಮೆಲ್ಲರೊಂದಿಗೆ ಮಾತನಾಡಿದಂತೆ ಅನಿಸುತ್ತದೆ. ಇಂಥ ಮಲ್ಟಿ ಡೈಮೆನ್ಷನಲ್ ತಲೆ ಮಾತ್ರ ಈ ದೇಶವನ್ನು ಕಟ್ಟುತ್ತದೆ.' ಇದೊಂದು ಪ್ರಚಾರ ಸಭೆಯ ರೂಪವಾಗಿದ್ದರೂ ಅದು ನೀಡುವ ಸಂದೇಶ ಮಾತ್ರ ದೊಡ್ಡದು.
ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಸಂದರ್ಭವಿರಬಹುದು. ಪುಣೆಯ ಕಾಲೇಜೊಂದರ ಕಾರ್ಯಕ್ರಮದಲ್ಲಿ ನಮೋ ಭಾಗಿಯಾಗಿದ್ದರು. ಬೆಳಗ್ಗೆ ಎದ್ದ ಮೋದಿ ಫೇಸ್ಬುಕ್ನಲ್ಲಿ ಒಂದು ಪ್ರಶ್ನೆ ಹಾಕಿದರು, 'ಪ್ರೀತಿಯ ಯುವ ಮನಗಳೇ, ಇಂದು ನಾನೇನು ಮಾತನಾಡಲಿ ಹೇಳಿ' ಎಂದರು. ಅಲ್ಲಿ ಪ್ರಸ್ತಾಪಿಸಿದ್ದ ಹತ್ತಾರು ವಿಚಾರಗಳನ್ನು ಇರಿಸಿಕೊಂಡೇ ಆ ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿ ಎದ್ದುನಿಂತು ಸೆಲ್ಯೂಟ್ ಹೊಡೆಯುವಂತೆ ಭಾಷಣ ಮಾಡಿದರು.
ಪ್ರತಿ ನಾಲ್ಕು ಮತದಾರರಲ್ಲಿ ಒಬ್ಬರನ್ನು ಈ ಬಾರಿ ಮೋದಿ ನೇರವಾಗಿ ಸಂಪರ್ಕಿಸಿದ್ದಾರಂತೆ. ಇದಕ್ಕೆ ಮೋದಿಯ ಟೆಕ್ನೋ ಪ್ರೀತಿಯೂ ಒಂದು ಕಾರಣ. ಮುಂದಿನ ಅರ್ಧ ದಶಕದ ಮೋದಿ ಸರ್ಕಾರದಲ್ಲೂ ಈ ದೇಶದ ಪ್ರತಿ ಯುವಕನೂ ಇದೇ ರೀತಿಯ ಇ-ಆಡಳಿತವನ್ನು ಬಯಸುತ್ತಾನೆ. ಮನಮೋಹನ ಸಿಂಗ್ರಂತೆ ಸೈಲೆಂಟ್ ಮೋಡ್ನಲ್ಲಿರದೇ ಇದೇ ಟೆಕ್ನೋ ಜಗತ್ತಿನಿಂದ ಈ ದೇಶದ ಜನರು ಸ್ಪಷ್ಟನೆ ಬಯಸಿದಾಗ ಮೋದಿಯಿಂದ ಉತ್ತರ ಬೇಕು ಎಂಬ ಹಂಬಲವಿರುತ್ತದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಮೋದಿಯ ಇಂಥ 'ಟೆಕ್ನಿಕಲ್' ನಡೆಗಳು ಆಡಳಿತದಲ್ಲಿ ಲಾಗುವಾಗಿ ಕೋಟ್ಯಂತರ ಉದ್ಯೋಗ ಸೃಷ್ಟಿಸುವ ಕನಸಿದೆ.
- ರಾಜೀವ ಹೆಗಡೆ
meet.hegde@gmail.com