ಸಮಕಾಲೀನ ಕನ್ನಡದ ಪ್ರಮುಖ ಚಿಂತಕರಲ್ಲಿ ಒಬ್ಬರಾಗಿರುವ ಬಸವರಾಜ ಕಲ್ಗುಡಿಯವರು ಕಾಲು ಶತಮಾನದ ಅವಧಿಯಲ್ಲಿ ಬರೆದ ವಿವಿಧ ಲೇಖನಗಳ ಸಂಕಲನ 'ಮೈಯೇ ಸೂರು ಮನವೇ ಮಾತು'. ಇದು ಸಂಸ್ಕೃತಿ, ಸಾಹಿತ್ಯ ಮತ್ತು ಸಂಶೋಧನೆಯ ಬರೆಹಗಳ ಮಿಶ್ರಣ.
ಈ ಕೃತಿಯಲ್ಲಿ ಐದು ಭಾಗಗಳಿವೆ. ಮೊದಲ ಭಾಗ 'ಮೈ ಮನದ ಮಾತು'ವಿನಲ್ಲಿ ಆರು ಲೇಖನಗಳು, ಎರಡನೆಯ ಭಾಗ 'ಕನ್ನಡ ಲೋಕ: ಆಧುನಿಕತೆಯ ವಿಭಿನ್ನ ಬಣ್ಣ'ದಲ್ಲಿ ನಾಲ್ಕು ಲೇಖನಗಳು ಇವೆ. ಮೂರನೆ ಭಾಗ ಕನ್ನಡದ ಕಣ್ಮಣಿಗಳು' ನಾಲ್ಕು ವ್ಯಕ್ತಿಚಿತ್ರಗಳನ್ನು ಒಳಗೊಂಡಿದೆ. ಜಿಎಸ್‌ಎಸ್, ಕಿ.ರಂ., ಶ್ರೀನಿವಾಸರಾಜು ಅವರ ವಿಶೇಷತೆಗಳನ್ನು ಅವರು ಇದರಲ್ಲಿ ಗುರುತಿಸಿದ್ದಾರೆ. ನಾಲ್ಕನೆ ಭಾಗ 'ಲೋಕಜ್ಞಾನ ಮತ್ತು ಕನ್ನಡ'ದಲ್ಲಿ ಐದು ಲೇಖನಗಳಿವೆ. ಐದನೆ ಭಾಗ 'ಕಾಲಜ್ಞಾನ'ದಲ್ಲಿ ಹದಿಮೂರು ಲೇಖನಗಳಿವೆ.
ಕಲ್ಗುಡಿಯವರು ಮೂಲತಃ ಪ್ರಾಧ್ಯಾಪಕರು. ವಿಷಯವನ್ನು ಖಚಿತವಾಗಿ ವಿದ್ಯಾರ್ಥಿಗಳಿಗೆ ಸಂವಹನ ಮಾಡುವುದು ಅವರ ಗುರಿ. ಇದು ಅವರ ಬರೆಹದಲ್ಲೂ ಕಾಣುತ್ತದೆ. ಇಲ್ಲಿ ಅವರು ನಡುಗನ್ನಡ ಸಾಹಿತ್ಯ, ಆಧುನಿಕ ಸಾಹಿತ್ಯ, ಶಾಸನಗಳ ಅಧ್ಯಯನ, ಜಾನಪದ ಸಂಶೋಧನೆ, ಸಾಮಾಜಿಕ ಚಿಂತನೆಯ ಬರೆಹಗಳಿವೆ.
ಕಲ್ಗುಡಿಯವರ ಮುಖ್ಯ ಕಾಳಜಿ ಕೃತಿಯೊಂದರ ಹೊಸ ಓದು. ಹಿಂದಿನವರು ಒಂದು ಕೃತಿಯ ಬಗ್ಗೆ ಏನೇ ಹೇಳಿದ್ದರೂ ಅದಕ್ಕೆ ಹೊರತಾದ ಗ್ರಹಿಕೆ ಅದರಿಂದ ಸಾಧ್ಯ ಎಂಬ ನಂಬಿಕೆ ಅವರದು. ಮುದ್ದಣನ ಬಗೆಗಿನ ಅವರ ಮಾತನ್ನು ನೋಡಿ- "ಕಾವ್ಯದಲ್ಲಿ ಭಾಷೆಯ ಬಳಕೆ ಮತ್ತು ಸಂವಹನದ ಸಮಸ್ಯೆಯನ್ನು ಈತ ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಸಂಸ್ಕೃತ ಮತ್ತು ಕನ್ನಡದ ಸಮಸ್ಯೆಯಾಗಿಯೇ ನೋಡಿದನೆನ್ನುವುದು ಗಮನಾರ್ಹ. ಇವನು ರಾಮಾಶ್ವಮೇಧ ಕಾವ್ಯದಲ್ಲಿ 'ಕಾವ್ಯಭಾಷೆ' ಮತ್ತು 'ಸಹೃದಯ ಕಲ್ಪನೆ'ಯನ್ನು ಕುರಿತು ಹೊಸ ನಿಲುವನ್ನು ಕನ್ನಡ ಸಂಸ್ಕೃತ ಸಂಬಂಧದಲ್ಲಿ ನೋಡಿದನೆನ್ನುವುದು ಗಮನಾರ್ಹ."
ಅವರು ಈ ಮುದ್ದಣನ ಭಾಷೆಯ ಪ್ರಯೋಗವನ್ನು ಜಿ.ಪಿ.ರಾಜರತ್ನಂ ಅವರ 'ರತ್ನನ ಪದಗಳು' ಕೃತಿಯಲ್ಲಿಯ ಭಾಷೆಯೊಂದಿಗೆ ಹೋಲಿಸಿ ನೋಡುತ್ತಾರೆ. ಇವೆರಡರ ಬಗೆಗೆ ಅವರ ಈ ಟಿಪ್ಪಣಿ ನೋಡಿ, 'ಇಂಥ ಉದ್ದೇಶಪೂರ್ವಕ ರಚನಾವಿನ್ಯಾಸಕ್ಕೆ ತನ್ನದೇ ಆದ ವಿಶಿಷ್ಟ ಲಕ್ಷಣವಿರುವಂತೆ ಸೃಜನಶೀಲತೆಯ ಚೌಕಟ್ಟಿನ ಮಿತಿಗಳೂ ಇರುತ್ತವೆಯಾದ್ದರಿಂದ, ಒಂದು ದ್ವೀಪದಂತೆ ಇವುಗಳು ಕನ್ನಡ ಕಾವ್ಯ ಪ್ರಪಂಚದಲ್ಲಿ ಉಳಿದುಬಿಟ್ಟವು'.
ಸ್ತ್ರೀ ಸಂವೇದನೆಯ ಕಾವ್ಯ ಹೇಗಿರುತ್ತದೆ ಎಂಬುದರ ಬಗ್ಗೆ ಮೂರು ಅಂಶಗಳನ್ನು ಅವರು ಮಂಡಿಸುತ್ತಾರೆ. 1.ವ್ಯಕ್ತಿನಿಷ್ಠ ಅನುಭವದ ಭಾಷೆಯಿಂದಾಗಿ ಈ ಕವನಗಳು ಸ್ವಗತದಂತೆ ತೋರುವ ಧಾಟಿಯು ಗಮನಿಸಬೇಕಾದ ಒಂದು ಅಂಶವಾಗಿದೆ. 2.ಗಂಡುಲೋಕವು ಒಂದು ಮುಖ್ಯವಾದ ಇದಿರಾಗುವ ವಸ್ತುವಾಗಿದ್ದರೂ ಕೊನೆಗೂ ಈ ಕವನಗಳು ಗಾಢವಾಗಿ ತೆಗೆದುಕೊಳ್ಳುವುದು 'ತನ್ನ' ಅಂದರೆ ಹೆಣ್ಣಿನ ಬದುಕಿನ ಆವರಣವನ್ನೇ! 3.ಮೇಲುನೋಟಕ್ಕೆ ಕುಟುಂಬವು ಇಲ್ಲಿ ಕೇಂದ್ರಸ್ಥಾನವಾಗಿ ವಸ್ತು ವಿಷಯವೆಂದು ಅನ್ನಿಸಿದರೂ ಬಹುಪಾಲು ಕವನಗಳು ಈ ಸಂಬಂಧದ ಕೋನವನ್ನು ಸಂಬಂಧ ಮತ್ತು ದಾರುಣತೆ ಹಾಗೂ ಹಾರೈಕೆಯ ಗಾಢವಾದ ಸಂಕೀರ್ಣ ನೆಲೆಯಲ್ಲಿ ನೋಡಲಾಗುತ್ತಿಲ್ಲವೆಂದೇ ಅನ್ನಿಸುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳಾ ಸಾಹಿತ್ಯದ ಬಗ್ಗೆ ಅವರು ಬರೆಯುವ ಷರಾ ಹೀಗಿದೆ- ಲೋಕಾನುಭವ ಮತ್ತು ತಾತ್ವಿಕ ಜಗತ್ತು ಈ ಹೊಸ ಬಗೆಯ ಕಣ್ಣಿನಿಂದ ನೋಡಿದಾಗ, ಅವ್ಯಕ್ತವಾದ ಲೋಕವು ಥಟ್ಟನೆ ಹೊಳೆದಂತೆ ಕಾಣುವ, ಹೊಸ ಬಗೆಯ ಅರಿವಿಗೆ ದಾರಿ ಮಾಡುವ ಒಂದು ವಿಸ್ಮಯವನ್ನು ಮಹಿಳಾ ಅಭಿವ್ಯಕ್ತಿ ದಕ್ಕಿಸಿಕೊಳ್ಳಬೇಕಾಗಿದೆ.
ಅಡಿಗರ ಪ್ರತಿಮಾವಿಧಾನದ ಮಾದರಿಯನ್ನು ಕಾವ್ಯ ಸೃಷ್ಟಿಯ ಸ್ವರೂಪವನ್ನಾಗಿ ಅನೇಕ ಕವಿಗಳು ಗ್ರಹಿಸಿದರೂ ಕಾವ್ಯಭಾಷೆಯಲ್ಲಿ ಹೊಸ ಲೋಕವನ್ನು ಕಟ್ಟಿ, ಶೋಧಿಸುವ ಮಾರ್ಗವನ್ನು ಅನುಸರಿಸಿದಂತೆ ಕಾಣುವುದಿಲ್ಲ ಎಂದು ಹೇಳುವ ಕಲ್ಗುಡಿಯವರು ಇದಕ್ಕೆ ಕಾರಣ ಆ ಕಾಲಕ್ಕಾಗಲೇ ವರ್ತಮಾನದ ತುರ್ತಿಗೆ ಪ್ರತಿಕ್ರಿಯಿಸುವ ಮಾದರಿಯು ಹೆಚ್ಚು ವ್ಯಾಪಕಗೊಂಡು, ಕಾವ್ಯಭಾಷೆಯೂ ಲೋಕಕ್ಕೆ ನೇರವಾಗಿ ಮುಖಾಮುಖಿಯಾಗುವ ಭಾಷೆಯನ್ನು ಸೃಷ್ಟಿಸಿಕೊಂಡಿದ್ದಿರಬೇಕು ಎಂದು ಹೇಳುವರು. ನವ್ಯದ ಭಾಷೆ ಹೇಗೆ ಬಂಡಾಯದ ಭಾಷೆಯಾಗತೊಡಗಿತ್ತು ಎಂಬುದರ ಸೂಚನೆಯನ್ನು ಅವರು ಇಲ್ಲಿ ನೀಡಿದ್ದಾರೆ.
ತಮಿಳಿಗೆ ಅನುವಾದಗೊಂಡ ಸಾವನ್ನು ವಸ್ತುವಾಗುಳ್ಳ ಕನ್ನಡ ಕತೆಗಳ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ, 'ದ್ರಾವಿಡ ಭಾಷಾಸಮುದಾಯಗಳ ಪರಸ್ಪರ ಸಂಬಂಧ ಮತ್ತು ವೈಶಿಷ್ಟ್ಯವನ್ನು ಅರಿಯಬೇಕಾದ ಈ ಕಾಲದ ಬಹುಮುಖ್ಯವಾದ ಕೆಲಸವನ್ನು ನಾವು ಮಾಡದೇ ಹೋದರೆ ರಾಜಕಾರಣದ ಸೂಕ್ಷ್ಮ ತಂತ್ರ ಹಾಗೂ ಅಮಾನವೀಯ ವರ್ತನೆಗಳನ್ನು ಎದುರಿಸುವ ಪರಿಣಾಮಕಾರಿಯಾದ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದೇ ಅರ್ಥ' ಎಂಬ ಮಾತನ್ನು ಹೇಳಿದ್ದಾರೆ. ಭಾಷೆಗಳ ಅಂತರ್‌ಸಂಬಂಧವನ್ನು ಅರಿಯುವುದಕ್ಕೆ ಅನುವಾದಗಳೂ ಸಹಾಯಕ ಎಂಬ ಸೂಚನೆಯೂ ಇಲ್ಲಿದೆ.
ಕಲ್ಗುಡಿಯವರ ಅಧ್ಯಯನದ ಹರಹು ಯಾವುದೇ ಮಿತಿಗೆ ಒಳಪಟ್ಟಿಲ್ಲ. ಈ ವೈವಿಧ್ಯವೇ ಈ ಕೃತಿಯ ವೈಶಿಷ್ಟ್ಯವೂ ಆಗಿದೆ.
ಪ್ರ: ಅಭಿನವ, ಬೆಂಗಳೂರು, ಪುಟಗಳು 370, ಬೆಲೆ ರು. 275
-ಡಾ. ವಾಸುದೇವ ಶೆಟ್ಟಿ