ವ್ಯಂಗ್ಯಚಿತ್ರಗಳನ್ನು ನಗಿಸುವುದಕ್ಕಷ್ಟೆ ಸೀಮಿತಗೊಳಿಸದೆ, ಅವುಗಳಿಂದ ಜನಜಾಗೃತಿ ಮೂಡಿಸುವ ಕೆಲಸ ಇಲ್ಲಿ ನಡೆದಿದೆ. ಜರ್ಮನಿ ಮೂಲದ ಸಸ್ಟೇನೆಬಲ್ ಸ್ಯಾನಿಟೇಷನ್ ಅಲೈಯನ್ಸ್ ಸಂಸ್ಥೆಯು ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಮತ್ತು ಇನ್ನಿತರ ಸಂಸ್ಥೆಗಳ ಸಹಯೋಗದೊಂದಿಗೆ ವ್ಯಂಗ್ಯಚಿತ್ರ ಸ್ಪರ್ಧೆಯನ್ನು ಏರ್ಪಡಿಸಿತ್ತು. ಶೌಚಾಲಯ ಮತ್ತು ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ತಪ್ಪು ಕಲ್ಪನೆಗಳ ಮತ್ತು ಮೌಢ್ಯಗಳ ನಿವಾರಣೆ ಇದರ ಉದ್ದೇಶನಾಗಿತ್ತು.
ಭಾರತವಲ್ಲದೆ ಹೊರರಾಷ್ಟ್ರಗಳಿಂದ 90ಕ್ಕೂ ಹೆಚ್ಚು ಪ್ರವೇಶಗಳು ಬಂದಿದ್ದವು. ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಐವತ್ತು ಸಾವಿರ ನಗದನ್ನು ಕನ್ನಡಿಗ ಯೋಗೀಶ್ ಶೆಟ್ಟಿಗಾರ್ ಗಳಿಸಿದರು. ಯೋಗೀಶ್ ಸಧ್ಯ ಹೈದರಾಬಾದಿನಲ್ಲಿ ತಂತ್ರಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಐದನೇ ಬಹುಮಾನ ನಾಡಿನ ಹಿರಿಯ ವ್ಯಂಗ್ಯಚಿತ್ರಗಾರ ಬಿ. ವಿ. ಪಾಂಡುರಂಗ ರಾವ್‌ಗೆ ದೊರೆತಿದೆ. ಸ್ಪರ್ಧೆಯ 50 ಉತ್ತಮ ಪ್ರವೇಶಗಳನ್ನು ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ತನ್ನ ಗ್ಯಾಲರಿಯಲ್ಲಿ ಪ್ರದರ್ಶಿಸುತ್ತಿದೆ. ಇದರಲ್ಲಿ ಕನ್ನಡಪ್ರಭದ ಕಲಾವಿದ ಸಂಕೇತ್ ಗುರುದತ್ತ ಅವರ 2 ವ್ಯಂಗ್ಯಚಿತ್ರಗಳಲ್ಲದೆ ಹೆಸರಾಂತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ, ಯತೀಶ್ ಶೆಟ್ಟಿಗಾರ್ ಮತ್ತು ರಘುಪತಿ ಎನ್.ಎಸ್. ಅವರ ವ್ಯಂಗ್ಯಚಿತ್ರಗಳು ಪ್ರದರ್ಶನದಲ್ಲಿವೆ. ಪ್ರದರ್ಶನ ಮೇ 24ರಿಂದ ಆರಂಭವಾಗಿದ್ದು ಜೂನ್ 7ರವರೆಗೆ ಇರುತ್ತದೆ. ಹೆಚ್ಚಿನ ವಿವರಗಳಿಗೆ: 9980091428.
ಸ್ಥಳ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ನಂ.1, ಮಿಡ್ ಫೋರ್ಡ್ ಹೌಸ್, ಮಿಡ್ ಫೋರ್ಡ್ ಗಾರ್ಡೆನ್,
ಟ್ರಿನಿಟಿ ವೃತ್ತ, ಎಂ. ಜಿ. ರಸ್ತೆ, ಬಿಗ್ ಕಿಡ್ಸ್‌ಕೆಂಪ್ ಹತ್ತಿರ, ಬೆಂಗಳೂರು.