ಹೆಚ್ಚಾಗಿ ಕವಿ ಎಂದೇ ಗುರುತಾಗಿರುವ ಬಿ.ಆರ್.ಲಕ್ಷ್ಮಣರಾವ್ ಕತೆಗಳನ್ನೂ ಬರೆದಿದ್ದಾರೆ ಎಂದರೆ ಬಹುಜನರಿಗೆ ನಂಬಿಕೆ ಹುಟ್ಟಲಿಕ್ಕಿಲ್ಲ. ಇಪ್ಪತ್ತು ಕತೆಗಳನ್ನು ಒಳಗೊಂಡಿರುವ ಅವರ ಸಮಗ್ರ ಕತೆಗಳ ಸಂಕಲನ 'ಪ್ರೀತಿಯ ಬೆಳಕು' ಇದೀಗ ಬಂದಿದೆ. ಲಕ್ಷ್ಮಣ ಅವರು ತಮ್ಮ ಮೊದಲ ಕತೆ 'ಚಂದನದ ಗೊಂಬೆ' ಬರೆದದ್ದು 1965ರಲ್ಲಿ. ಈವರೆಗಿನ ಕೊನೆಯ ಕತೆ 'ಘಾತ' ಬರೆದದ್ದು 2002ರಲ್ಲಿ. ಈ 37 ವರ್ಷಗಳಲ್ಲಿ ಬರೆದದ್ದು 20 ಕತೆಗಳೆಂದರೆ ಅವರ ಸಂಯಮ ತೋರಿಸುತ್ತದೆ. ಅವರ ಕವಿತೆಗಳಂತೆ ಕತೆಗಳೂ ಧ್ವನಿಪೂರ್ಣವಾಗಿವೆ.
ಪ್ರ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು, ಪುಟಗಳು 263, ಬೆಲೆ ರು. 150
ಬರಗೂರರ ವಾಚಿಕೆ
ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸೃಷ್ಟಿಕ್ರಿಯೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ನಮ್ಮ ಸಮಕಾಲೀನ ವಿಚಾರವಂತರಲ್ಲಿ ಒಬ್ಬರು. ಬಂಡಾಯ ಮನೋಧರ್ಮದ ಅವರು ಯಾವುದೇ ಮುಚ್ಚುಮರೆ ಇಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವವರು. ಸಾವಿರಾರು ಪುಟಗಳಲ್ಲಿ ಹಬ್ಬಿರುವ ಅವರ ಬರೆಹದ ರುಚಿಯನ್ನು ಓದುಗರಿಗೆ ಸಂಕ್ಷಿಪ್ತವಾಗಿ ನೀಡುವ ಉದ್ದೇಶದಿಂದ ಆರ್.ಜಿ.ಹಳ್ಳಿ ನಾಗರಾಜ ಅವರು 'ಸೂರ್ಯ ಸಂಸ್ಕೃತಿ' ಹೆಸರಿನಲ್ಲಿ ವಾಚಿಕೆಯನ್ನು ರೂಪಿಸಿದ್ದಾರೆ. ಬರಗೂರರ ಬರೆಹದ ವೈಶಿಷ್ಟ್ಯವನ್ನು ಇದರಲ್ಲಿ ಅರಿಯಬಹುದು.
ಪ್ರ: ಭಾಗವತರು., ಬೆಂಗಳೂರು, ಪುಟಗಳು 294, ಬೆಲೆ ರು. 200
ಸುಳಿಯೋ ಸುಂಟರಗಾಳಿಯೋ
ಪ್ರಹ್ಲಾದ ಅಗಸನಕಟ್ಟೆಯವರ ಕತೆಗಳ ಹನ್ನೊಂದನೆ ಸಂಕಲನ 'ಸುಳಿಯೋ ಸುಂಟರಗಾಳಿಯೋ'. ಕತೆಗಳನ್ನೇ ತಮ್ಮ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವನ್ನಾಗಿಸಿಕೊಂಡಿರುವ ಪ್ರಹ್ಲಾದ ಇದರಲ್ಲಿ ಹನ್ನೆರಡು ಕತೆಗಳನ್ನು ನೀಡಿದ್ದಾರೆ. ಜೀವನರಂಗದಲ್ಲಿ ಜನರು ಧರಿಸುವ ಮುಖವಾಡಗಳನ್ನು ಬಹಿರಂಗಗೊಳಿಸುವುದರಲ್ಲಿ ಅವರಿಗೆ ಅಪಾರವಾದ ಆಸಕ್ತಿ. ಇದೊಂದು ರೀತಿಯಲ್ಲಿ ಬದುಕಿನ ಸತ್ಯದ ಶೋಧ. ಸಂಕೀರ್ಣ ಸನ್ನಿವೇಶವನ್ನು ವ್ಯಕ್ತಿ ಎದುರುಗೊಳ್ಳುವ ರೀತಿಯೂ ಅವರ ಆಕರ್ಷಣೆಗೆ ಸಿಲುಕಿದೆ. ನಿತ್ಯ ಎದುರಾಗುವ ವ್ಯಕ್ತಿಗಳೇ ಕತೆಗಳ ಪಾತ್ರವನ್ನಾಗಿಸುವ ಅವರ ರೀತಿಯು ವಿಶೇಷವಾದ್ದದು.
ಪ್ರ: ಕಣ್ವ ಪಬ್ಲಿಕೇಷನ್ಸ್ ಪ್ರೈವೇಟ್ ಲಿ., ಬೆಂಗಳೂರು, ಪುಟಗಳು 176, ಬೆಲೆ ರು. 120