ತಚ್ಚೋಳಿಯ ಕಣ್ಮಣಿ ಬಾಲ ಒದೇನ ಮತ್ತು ಅವನ ಅಮ್ಮ ತಚ್ಚೋಳಿ ಮೇಪ್ಪದ ಉಪ್ಪಾಟ್ಟಿ ಅದೋ ಹೋಗುತ್ತಿದ್ದಾರೆ! ಆಕೆ ತುಂಬ ಒಡವೆಗಳನ್ನು ಹಾಕಿಕೊಂಡಿದ್ದಾಳೆ. ರೇಶ್ಮೆಯ ಬಟ್ಟೆ ಧರಿಸಿದ್ದಾಳೆ. ಅವರು ಹೋಗುತ್ತಿರುವುದು ಒಲವಣ್ಣೂರ್ ಕಾವ್‌ಗೆ. ಅವರು ಅಲ್ಲಿಗೆ ತಲುಪಿದಾಗ ಅಲ್ಲಿನ ದೇವತೆ ಭಗವತಿ ಅಲಂಕರಿಸಿಕೊಂಡು ಮೂಡು ದಿಕ್ಕಿಗೆ ಹೊರಟಿದ್ದಾಳೆ (ಭಗವತಿಯನ್ನು ಅಲಂಕರಿಸಿ ಮೆರವಣಿಗೆ ಮಾಡಿಸುತ್ತಿದ್ದಾರೆ). ಭಗವತಿ ಉಪ್ಪಾಟಿಯನ್ನು ಕಂಡಳು. ಅವಳನ್ನು ಚೆನ್ನಾಗಿ ನೋಡಿದಳು. ಅವಳ ಮೈಗೆ ಸೇರಿಕೊಂಡಳು. ಕೂಡಲೇ ಉಪ್ಪಾಟ್ಟಿ ರಕ್ತಕಾರಿ ಕೆಳಗೆ ಬಿದ್ದಳು. ಸ್ವಲ್ಪ ಹೊತ್ತಲ್ಲೇ ತೀರಿಕೊಂಡಳು. ಅದನ್ನು ಕೇಳಿ ತಚ್ಚೋಳಿ ಕೋಮ ಕುರುಪ್ಪ್ ಇನ್ನೂ ಕೆಲಮಂದಿಯನ್ನು ಸೇರಿಸಿಕೊಂಡು ಅಲ್ಲಿಗೆ ತಲುಪಿದ. ಅಣ್ಣ ತಮ್ಮಂದಿರಿಬ್ಬರೂ ಸೇರಿ ಬೇಗನೆ ತಚ್ಚೋಳಿ ಮೇಪ್ಪದ ಉಪ್ಪಾಟಿಯಮ್ಮನಿಗೆ ರೇಶ್ಮೆಬಟ್ಟೆ ಹೊದೆಸಿದರು. ಹಾಗೆ ಹೊದೆಸಿ ಮೇನೆಯನ್ನು ಸಿದ್ಧಪಡಿಸಿದರು. ಒಲವಣ್ಣೂರು ಕಾವಿನಿಂದಲೇ ಸಾವಿರಾರು ಜನಕ್ಕೆ ಅಕ್ಕಿ ದಾನಕೊಟ್ಟರು. ಬಳಿಕ ಮೇನೆಯನ್ನು ಹೊರಿಸಿಕೊಂಡು ತಚ್ಚೋಳಿ ಮೇಪ್ಪದಲ್ಲಿ ಇಳಿಸಿದರು. ಅಷ್ಟರಲ್ಲೇ ಕಂಡಾಚ್ಚೇರಿ ಚಾಪ್ಪ ಹೆಣ ಸುಡುವುದಕ್ಕೆ ಆಗಬೇಕಾದ ಎಲ್ಲ ಸಿದ್ಧತೆಗಳನ್ನು ಆಳುಗಳಿಂದ ಮಾಡಿಸಿದ. ಎಲ್ಲ ಕೆಲಸಗಳನ್ನು ಮುಗಿಸಿದ ಬಳಿಕ ತಚ್ಚೋಳಿ ಮೇಪ್ಪದ ಉಪ್ಪಾಟ್ಟಿಯನ್ನು ಒಯ್ದು ಸುಟ್ಟರು. ತಚ್ಚೋಳಿಯ ಕಣ್ಮಣಿ ಬಾಲಒದೇನನೂ ಅವನ ಅಣ್ಣನೂ ತುಂಬ ಅಕ್ಕಿ, ಪಂಚೆಗಳನ್ನು ಅನೇಕ ಜನರಿಗೆ ಕೊಟ್ಟರು.
ಅತ್ತ ಅವರು ಹಾಗಿರಲು ತುಂಬ ದಿನಗಳುರುಳಿದವು. ಓಣಂ ಹಬ್ಬವು ಹತ್ತಿರ ಬಂತು. ಒದೇನ ಚೀನಂ ಮನೆಗೆ(ತಂದೆ ಮನೆ) ಹೋದ. ತಂಙಳ್ ಬಾವುನ್ನೋರ್‌ರನ್ನು(ತಂದೆ) ಕಂಡ. ಬಾವುನ್ನೋರ್ ಬಹಳ ಹಿಂದೆ ಒದೇನನ ಅಮ್ಮನನ್ನು ಬಿಟ್ಟ ಬಳಿಕ ಇದೇ ಮೊದಲ ಬಾರಿಗೆ ಒದೇನ ಅಲ್ಲಿಗೆ ಹೋಗುತ್ತಿರುವುದು. ಓಣಂ ಹಬ್ಬಕ್ಕೆ ನೀಡುವ ಹೊಸ ಬಟ್ಟೆಗಾಗಿ ಅವನು ಅಲ್ಲಿಗೆ ಹೋದಾಗ ಚೀನಂ ಮನೆಯ ಬಾವುನ್ನೋರ್ ಚಾವಡಿಯಲ್ಲಿ ಕುಳಿತಿದ್ದಾರೆ. ಬಾವುನ್ನೋರ್ ಅವನಿಗೆಂದರು- ತಚ್ಚೋಳಿ ಮೇಪ್ಪದ ಕುಂಇದೇನ, ಬಂದ ದಾರಿಯಲ್ಲಿ ಹಾಗೆಯೇ ಹಿಂದಿರುಗಿ ಬಿಡು! ಒದೇನನೆಂದ- ಬಂದ ಜಾಗ ಸಂದುಹೋಯ್ತಲ್ಲ! ಇದೀಗ ನಾನು ಮಾತ್ರ ಇದ್ದೇನೆ. ಗೊತ್ತಲ್ಲವೆ? ಆಗ ತಂಙಳ್ ಎಂದರು- ಹಾಗಾದರೆ ಚಾವಡಿಯ ಬೋದಿಗೆ ಕಂಬದ ಬಳಿ ಕುಳಿತುಕೋ ಒದೇನ. ಅದಕ್ಕೆ ಒದೇನನೆಂದ- ಬೋದಿಗೆಕಂಬ ನನ್ನ ಮನೆಯಲ್ಲೂ ಇದೆ. ನಾನು ಇಲ್ಲಿಯೇ ನಿಂತಿರುತ್ತೇನೆ.
ತಂಙಳೆಂದರು- ಹಾಗಾದರೆ ನಿನ್ನ ಉರುಮಿ ಇದೆಯಲ್ಲ, ಅದನ್ನು ಕೆಳಗಿಟ್ಟು ಕುಳಿತುಕೋ. ಒದೇನನೆಂದ- ಉರುಮಿ ನನ್ನ ಕುಂಡೆಗೆ ಸರಿಹೊಂದುವುದಿಲ್ಲ. ಅದು ನನ್ನ ಕೈಯಲ್ಲೇ ಬೇಕು.
ಪುಸ್ತಕ: ಕೇರಳದ ಜನಪದವೀರ ತಚ್ಚೋಳಿ ಒದೇನನ್
ಲೇಖಕರು: ಡಾ. ಕೆ.ಕಮಲಾಕ್ಷ, ಬೆಲೆ: 140 ರೂ.
ಪ್ರಕಟಣೆ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ