ವಿ.ಹೇಮಂತಕುಮಾರ್, ಬೆಂಗಳೂರು
ಹೆಂಡತಿಯು ಗಂಡನ ಹೆಸರನ್ನು ಹೇಳಲು ನಾಚಿಕೊಳ್ಳುತ್ತಾಳೆ ಏಕೆ ?
- ಕೆಲವು ಗಂಡಂದಿರು ಅಂತಹ 'ಕೆಲಸ' ಮಾಡಿರುತ್ತಾರೆ!
ಶ್ರೀಕಾಂತ ಮುದಗಲ್ಲ, ಇಳಕಲ್
= ಅಲಂಕಾರಕ್ಕೂ, ಅಹಂಕಾರಕ್ಕೂ ವ್ಯತ್ಯಾಸವೇನು?
- ಅಲಂಕಾರಕ್ಕೆ ಜನ ಬೀಳ್ತಾರೆ, ಅಹಂಕಾರಕ್ಕೆ ನೀವೇ ಬೀಳ್ತೀರಿ!
ಪಿ.ಜೆ.ರಾಘವೇಂದ್ರ, ಮೈಸೂರು
= ಪಿಜ್ಜಾ ಹಿಂದೆ ಹೋದವರಿಗೆ ಪುನಃ ನೀರ್ ದೋಸೆಯೇ ಗತಿಯಾಯ್ತಾ?
- ಆದರೆ ಅದನ್ನು ಹುಯ್ಯಲಿಕ್ಕೆ ಸರಿಯಾದ ಕಾವಲಿಯೇ ಇಲ್ಲವಲ್ಲ ಅನ್ನುತ್ತಿದ್ದಾರೆ ಜಗ್ಗೇಶ್!
ನೇತ್ರಾ ಆನೆಕೆರೆ ಬೀದಿ, ಮಂಡ್ಯ
ತರಗತಿಯಲ್ಲಿ ಕಲಿತವನನ್ನು ವಿದ್ಯಾರ್ಥಿ ಅನ್ನುತ್ತಾರೆ, ಹೊರಗಡೆಯಿದ್ದು ಕಲಿತವನನ್ನು ಏನಂತಾರೆ?
- ಔಟ್‌ಸ್ಟ್ಯಾಂಡಿಂಗ್ ಪರ್ಸನಾಲಿಟಿ!
ಕೆ.ಜೆ.ರಾಮಪ್ರಸಾದ್, ಕಡೂರು
= ಜನರು ಪದವಿ ಬಂದಾಗ ಪರಮಾತ್ಮನನ್ನೂ ಮರೆಯುತ್ತಾರಲ್ಲ?
- ಪದವಿ ಹೋದಾಗ ನೆನೆಯುತ್ತಾರೆ ಬಿಡಿ!
ಬಿ.ಎಂ.ಪರಮಶಿವಮೂರ್ತಿ, ಬೆಂಗಳೂರು
ನೀಚನಿಗೂ, ಪರಮ ನೀಚನಿಗೂ ವ್ಯತ್ಯಾಸವೇನು?
- ಈ ಸಾರಿ ಮತದಾನ ಮಾಡುವಾಗಲೂ ಮತದಾರರಿಗೆ ಇದೇ ಪ್ರಶ್ನೆ ಕಾಡಿತ್ತು!
ಎಂ.ಬಿ.ಕೃಷ್ಣಮೂರ್ತಿ, ಚಾಮರಾಜನಗರ
= ಈ ಲೋಕದಲ್ಲಿ ಜನಿಸಿದ್ದು ಗಂಡು ಮೊದಲೋ, ಹೆಣ್ಣು ಮೊದಲೋ?
-ಜನಿಸಿದ್ದು ಮೊದಲು ಗಂಡು, ಮಾತನಾಡಲು ಕಲಿತದ್ದು ಮೊದಲು ಹೆಣ್ಣು!
- ಎಸ್.ವಿ. ಪದ್ಮನಾಭ