ಸಂಗ್ರಹ ಚಿತ್ರ 
ಜೀವನಶೈಲಿ

ದುಬಾರಿ ಕಾಸ್ಮೆಟಿಕ್ಸ್ ಬಿಸಾಡಲು ಮನಸ್ಸಿಲ್ಲವೇ..? Expired ಸೌಂದರ್ಯವರ್ಧಕಗಳ ಬಳಸಿದರೆ ಏನಾಗುತ್ತೆ..? 6M, 12M, 24M ಗುರುತುಗಳ ಅರ್ಥವೇನು ಗೊತ್ತಾ..?

ದುಬಾರಿ ಬೆಲೆ ಕೊಟ್ಟು ಖರೀದಿಸಿದ ಲಿಪ್‌ಸ್ಟಿಕ್, ಫೌಂಡೇಶನ್ ಅಥವಾ ಮಸ್ಕರಾ ಇನ್ನೂ ಸ್ವಲ್ಪ ಉಳಿದಿದೆ ಎಂಬ ಕಾರಣಕ್ಕೆ ಅವುಗಳನ್ನು ವರ್ಷಗಟ್ಟಲೆ ಬಳಸುವ ಅಭ್ಯಾಸ ಅನೇಕರಿಗಿದೆ.

ಇಂದಿನ ದಿನಗಳಲ್ಲಿ ಸೌಂದರ್ಯವರ್ಧಕಗಳು (Cosmetics) ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿವೆ. ನೆಚ್ಚಿನ ಲಿಪ್‌ಸ್ಟಿಕ್‌ ಬ್ಯಾಗ್‌ನ ಮೂಲೆಯಲ್ಲಿ ಸಿಕ್ಕಾಗ, ಇನ್ನೂ ಸ್ವಲ್ಪ ಉಳಿದಿರುವ ಮಸ್ಕರಾ ಕಂಡಾಗ ಅಥವಾ ದುಬಾರಿ ಬೆಲೆಗೆ ಖರೀದಿಸಿದ ಫೌಂಡೇಷನ್‌ ಬಿಸಾಡಲು ಮನಸ್ಸಾಗದಿದ್ದಾಗ ಬಹುತೇಕರು ಮಾಡುವ ಕೆಲಸ ಒಂದೇ. ಅವುಗಳನ್ನು ಮತ್ತೊಮ್ಮೆ ಬಳಸುವುದು. ಉತ್ಪನ್ನ ನೋಡಲು ಚೆನ್ನಾಗಿದೆ, ವಾಸನೆಯೂ ಅಷ್ಟೇನೂ ಬದಲಾಗಿಲ್ಲ ಎಂಬ ಕಾರಣಕ್ಕೆ ಬಳಕೆಯನ್ನು ಮುಂದುವರಿಸುತ್ತೇವೆ.

ಆದರೆ, ನಾವು ಬಳಸುವ ಮೇಕಪ್ ಉತ್ಪನ್ನಗಳ ಅವಧಿ (Expiry Date) ಮುಗಿದಿದೆಯೇ ಎಂಬುದನ್ನು ಎಷ್ಟು ಬಾರಿ ಗಮನಿಸುತ್ತೇವೆ? ದುಬಾರಿ ಬೆಲೆ ಕೊಟ್ಟು ಖರೀದಿಸಿದ ಲಿಪ್‌ಸ್ಟಿಕ್, ಫೌಂಡೇಶನ್ ಅಥವಾ ಮಸ್ಕರಾ ಇನ್ನೂ ಸ್ವಲ್ಪ ಉಳಿದಿದೆ ಎಂಬ ಕಾರಣಕ್ಕೆ ಅವುಗಳನ್ನು ವರ್ಷಗಟ್ಟಲೆ ಬಳಸುವ ಅಭ್ಯಾಸ ಅನೇಕರಿಗಿದೆ. ಆದರೆ, ಅವಧಿ ಮೀರಿದ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ ಕೇವಲ ನಿಮ್ಮ ಅಂದ ಕೆಡುವುದು ಮಾತ್ರವಲ್ಲ, ನಿಮ್ಮ ಚರ್ಮದ ಆರೋಗ್ಯ, ಕಣ್ಣಿನ ಸುರಕ್ಷತೆ ಮತ್ತು ಜೇಬಿಗೂ ದೊಡ್ಡ ಕತ್ತರಿ ಬೀಳಬಹುದು.

ಹಳೆಯ ಮೇಕಪ್‌ನಲ್ಲಿರಬಹುದು ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾ

ಸೌಂದರ್ಯವರ್ಧಕಗಳ ಅವಧಿ ಮುಗಿಯುವುದು ಎಂದರೆ ಪ್ಯಾಕ್‌ ಮೇಲೆ ಮುದ್ರಿಸಿರುವ ದಿನಾಂಕವನ್ನು ದಾಟುವುದು ಮಾತ್ರವಲ್ಲ. ಉತ್ಪನ್ನವನ್ನು ತೆರೆದ ಬಳಿಕ ಅದನ್ನು ಹೇಗೆ ಬಳಸುತ್ತೇವೆ, ಎಲ್ಲಿ ಇಡುತ್ತೇವೆ, ಎಷ್ಟು ಬಾರಿ ಮುಟ್ಟುತ್ತೇವೆ ಮತ್ತು ಎಷ್ಟು ಕಾಲ ಸಂಗ್ರಹಿಸಿಡುತ್ತೇವೆ ಎಂಬುದೂ ಮುಖ್ಯವಾಗುತ್ತದೆ.

ಸಂಗ್ರಹ ಚಿತ್ರ

ಪ್ರತಿಬಾರಿ ಮಸ್ಕರಾ ಬ್ರಷ್‌ ಅನ್ನು ಟ್ಯೂಬ್‌ಗೆ ಹಾಕುವಾಗ, ಕ್ರೀಮ್‌ಗೆ ಬೆರಳು ಹಾಕುವಾಗ ಚರ್ಮದ ಮೇಲಿನ ಎಣ್ಣೆ, ಧೂಳು ಮತ್ತು ಬ್ಯಾಕ್ಟೀರಿಯಾಗಳು ಉತ್ಪನ್ನದೊಳಗೆ ಸೇರುವ ಸಾಧ್ಯತೆ ಇರುತ್ತದೆ. ಹೊಸ ಉತ್ಪನ್ನಗಳಲ್ಲಿ ಇಂತಹ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯಲು ಸಂರಕ್ಷಕ ಅಂಶಗಳನ್ನು ಸೇರಿಸಲಾಗಿರುತ್ತದೆ. ಆದರೆ, ಕಾಲ ಕಳೆದಂತೆ ಅವುಗಳ ಪರಿಣಾಮಕಾರಿತ್ವ ಕಡಿಮೆಯಾಗಬಹುದು.

ಇದರಿಂದ ಉತ್ಪನ್ನದ ಗುಣಮಟ್ಟ ಮತ್ತು ಸ್ವರೂಪ ಬದಲಾಗುತ್ತದೆ. ಮೊದಲು ಸುಲಭವಾಗಿ ಚರ್ಮಕ್ಕೆ ಹೊಂದಿಕೊಳ್ಳುತ್ತಿದ್ದ ಫೌಂಡೇಷನ್‌ ಪದರಪದರವಾಗಿ ಬೇರ್ಪಡಬಹುದು ಅಥವಾ ಬಣ್ಣ ಬದಲಾಗಬಹುದು. ಮಸ್ಕರಾ ಒಣಗಿ ಉಂಡೆಯಂತಾಗಬಹುದು.

ಲಿಪ್‌ ಗ್ಲಾಸ್‌ನ ಬಣ್ಣ ಮತ್ತು ವಿನ್ಯಾಸದಲ್ಲೂ ವ್ಯತ್ಯಾಸ ಕಾಣಿಸಬಹುದು. ಇಂತಹ ಬದಲಾವಣೆಗಳನ್ನು ಕೆಲವರು ತಮ್ಮ ಚರ್ಮದ ಸಮಸ್ಯೆ ಅಥವಾ ಮೇಕಪ್‌ ಮಾಡುವ ವಿಧಾನದಲ್ಲಿನ ತಪ್ಪು ಎಂದು ಭಾವಿಸುತ್ತಾರೆ. ಆದರೆ, ಅದಕ್ಕೆ ಕಾರಣ ಹಳೆಯ ಉತ್ಪನ್ನವೂ ಆಗಿರಬಹುದು.

ಅಷ್ಟೇ ಅಲ್ಲ, ಉತ್ಪನ್ನದಲ್ಲಿರುವ ಸಕ್ರಿಯ ಅಂಶಗಳ ಪರಿಣಾಮವೂ ಕಡಿಮೆಯಾಗಬಹುದು. ಫೌಂಡೇಷನ್‌ನಲ್ಲಿರುವ ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುವ ಅಂಶಗಳು ಮೊದಲಿನಷ್ಟು ಪರಿಣಾಮಕಾರಿಯಾಗಿರದೆ ಇರಬಹುದು. ತೇವಾಂಶ ನೀಡಬೇಕಾದ ಕ್ರೀಮ್‌ ಕೂಡ ನಿರೀಕ್ಷಿತ ಫಲಿತಾಂಶ ನೀಡದಿರಬಹುದು. ಆದರೆ, ಕಣ್ಣಿಗೆ ಕಾಣದ ಅಪಾಯ ಇನ್ನೂ ಗಂಭೀರವಾಗಿರುತ್ತದೆ.

ಮೊಡವೆ, ತುರಿಕೆ, ಕಣ್ಣಿನ ಸೋಂಕು: ಆರೋಗ್ಯದ ಮೇಲೂ ಪರಿಣಾಮ

ಅವಧಿ ಮೀರಿದ ಸೌಂದರ್ಯವರ್ಧಕಗಳಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಅಚ್ಚು ಬೆಳೆಯಬಹುದು. ಉತ್ಪನ್ನದ ಬಣ್ಣ, ವಾಸನೆ ಅಥವಾ ವಿನ್ಯಾಸ ಬದಲಾಗದಿದ್ದರೂ ಅದು ಕಲುಷಿತವಾಗಿರುವ ಸಾಧ್ಯತೆ ಇದೆ. ಹೀಗಾಗಿ ವಾಸನೆ ನೋಡಿ ಉತ್ಪನ್ನ ಸುರಕ್ಷಿತವೇ ಎಂದು ನಿರ್ಧರಿಸುವುದು ಸರಿಯಲ್ಲ.

ಇಂತಹ ಉತ್ಪನ್ನಗಳನ್ನು ಬಳಸುವುದರಿಂದ ಚರ್ಮದಲ್ಲಿ ಕೆಂಪಾಗುವುದು, ತುರಿಕೆ, ಊತ, ಮೊಡವೆ ಮತ್ತು ಚರ್ಮದ ರಂಧ್ರಗಳು ಮುಚ್ಚಿಕೊಳ್ಳುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕಣ್ಣಿನ ಸುತ್ತಲಿನ ಚರ್ಮ ಹೆಚ್ಚು ಸೂಕ್ಷ್ಮವಾಗಿರುವುದರಿಂದ ಸೋಂಕಿನ ಅಪಾಯವೂ ಹೆಚ್ಚಿರುತ್ತದೆ. ಕಣ್ಣಿನ ರೆಪ್ಪೆಗಳಲ್ಲಿ ಗುಳ್ಳೆ ಅಥವಾ ಉರಿಯೂತ ಉಂಟಾಗಬಹುದು.

ಕಣ್ಣು ಕೆಂಪಾಗುವುದು ಮತ್ತು ಸೋಂಕು ಕಾಣಿಸಿಕೊಳ್ಳಬಹುದು. ತುಟಿಗಳ ಮೇಲೆ ಬಳಸುವ ಕಲುಷಿತ ಉತ್ಪನ್ನಗಳು ಕೆಲವರಲ್ಲಿ ಹರ್ಪಿಸ್‌ ಸೋಂಕಿನ ಮರುಕಳಿಕೆಗೆ ಕಾರಣವಾಗಬಹುದು. ಗಾಯಗೊಂಡ ಚರ್ಮದ ಮೇಲೆ ಇಂತಹ ಉತ್ಪನ್ನಗಳನ್ನು ಬಳಸಿದರೆ ಅಪರೂಪಕ್ಕೆ ಗಂಭೀರ ಸೋಂಕು ಉಂಟಾಗುವ ಸಾಧ್ಯತೆಯೂ ಇದೆ.

ಮಸ್ಕರಾ, ಐಲೈನರ್‌ ಬಳಕೆಯಲ್ಲಿ ಇರಲಿ ಹೆಚ್ಚಿನ ಎಚ್ಚರಿಕೆ

ಮಸ್ಕರಾ ಮತ್ತು ದ್ರವ ರೂಪದ ಐಲೈನರ್‌ ಬಳಕೆಯಲ್ಲಿ ಹೆಚ್ಚು ಎಚ್ಚರಿಕೆ ಅಗತ್ಯ. ಇವುಗಳನ್ನು ಇಡುವ ಟ್ಯೂಬ್‌ ಕತ್ತಲಿನಿಂದ ಕೂಡಿದ್ದು, ತೇವಾಂಶ ಮತ್ತು ಉಷ್ಣತೆ ಇರುವುದರಿಂದ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಪ್ರತಿಬಾರಿ ಬ್ರಷ್‌ ಅನ್ನು ಹೊರತೆಗೆದು ಮತ್ತೆ ಒಳಗೆ ಹಾಕುವಾಗ ಬ್ಯಾಕ್ಟೀರಿಯಾಗಳು ಉತ್ಪನ್ನದೊಳಗೆ ಸೇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಸ್ಕರಾ ಇನ್ನೂ ಸಾಕಷ್ಟಿದ್ದರೂ ತೆರೆದ ಮೂರು ತಿಂಗಳ ಬಳಿಕ ಅದನ್ನು ಬದಲಾಯಿಸುವಂತೆ ಚರ್ಮರೋಗ ತಜ್ಞರು ಸಾಮಾನ್ಯವಾಗಿ ಸಲಹೆ ನೀಡುತ್ತಾರೆ.

ಸಂಗ್ರಹ ಚಿತ್ರ

ಒಣಗಿದ ಮಸ್ಕರಾವನ್ನು ಮತ್ತೆ ಬಳಸಲು ಅದಕ್ಕೆ ನೀರು ಅಥವಾ ಜೆಲ್ ಸೇರಿಸುವುದು ಮತ್ತೊಂದು ಅಪಾಯಕಾರಿ ಅಭ್ಯಾಸ. ಇದರಿಂದ ಹೊಸ ಸೂಕ್ಷ್ಮಜೀವಿಗಳು ಸೇರುವುದಲ್ಲದೆ, ಉತ್ಪನ್ನವನ್ನು ಸುರಕ್ಷಿತವಾಗಿಡಲು ಬಳಸಿರುವ ಸಂರಕ್ಷಕ ಅಂಶಗಳ ಸಾಂದ್ರತೆಯೂ ಕಡಿಮೆಯಾಗಬಹುದು. ಮತ್ತೊಬ್ಬರ ಜೊತೆ ಕಣ್ಣಿನ ಮೇಕಪ್‌ ಉತ್ಪನ್ನಗಳನ್ನು ಹಂಚಿಕೊಳ್ಳುವುದೂ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಅವರ ಕಣ್ಣು ಆರೋಗ್ಯವಾಗಿರುವಂತೆ ಕಂಡರೂ ಸೋಂಕು ಹರಡುವ ಸಾಧ್ಯತೆಯನ್ನು ನಿರ್ಲಕ್ಷಿಸಬಾರದು.

ಪುಡಿ ರೂಪದ ಮೇಕಪ್‌ ಹೆಚ್ಚು ಕಾಲ ಬಾಳಿಕೆ ಬರುತ್ತಾ?

ದ್ರವ ಮತ್ತು ಕ್ರೀಮ್‌ ಉತ್ಪನ್ನಗಳಿಗೆ ಹೋಲಿಸಿದರೆ ಪುಡಿ ರೂಪದ ಐಶ್ಯಾಡೋ, ಬ್ಲಷ್‌ ಮುಂತಾದವು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ತೇವಾಂಶ ಕಡಿಮೆ ಇರುವುದರಿಂದ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನುಕೂಲ ಕಡಿಮೆ. ಸ್ವಚ್ಛವಾಗಿ ಮತ್ತು ಒಣ ಜಾಗದಲ್ಲಿ ಇಟ್ಟರೆ ಇವು ಸುಮಾರು ಎರಡು ವರ್ಷಗಳವರೆಗೆ ಬಳಸಲು ಯೋಗ್ಯವಾಗಿರಬಹುದು. ಆದರೆ, ಅವುಗಳೂ ಶಾಶ್ವತವಲ್ಲ. ಪುಡಿ ಗಟ್ಟಿಯಾಗುವುದು, ಸರಿಯಾಗಿ ಹರಡದಿರುವುದು, ಬಣ್ಣ ಅಥವಾ ವಿನ್ಯಾಸ ಬದಲಾಗುವುದು ಕಂಡುಬಂದರೆ ಬಳಕೆಯನ್ನು ನಿಲ್ಲಿಸಬೇಕು.

ನೈಸರ್ಗಿಕ ಅಥವಾ ಸಂರಕ್ಷಕ ಅಂಶಗಳಿಲ್ಲದ ಉತ್ಪನ್ನಗಳು ಹೆಚ್ಚು ಸುರಕ್ಷಿತ ಎಂಬ ಭಾವನೆಯೂ ಸರಿಯಲ್ಲ. ಇಂತಹ ಉತ್ಪನ್ನಗಳು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುವ ಅಂಶಗಳ ಕೊರತೆಯಿಂದ ಬೇಗ ಹಾಳಾಗಬಹುದು.

ಪ್ಯಾಕ್‌ ಮೇಲಿನ 6M, 12M, 24M ಗುರುತುಗಳ ಅರ್ಥವೇನು?

ಬಹುತೇಕ ಸೌಂದರ್ಯವರ್ಧಕಗಳ ಪ್ಯಾಕ್‌ ಮೇಲೆ ತೆರೆದ ಡಬ್ಬಿಯ ಆಕಾರದ ಚಿಕ್ಕ ಗುರುತನ್ನು ಗಮನಿಸಿರಬಹುದು. ಅದರೊಳಗೆ 6M, 12M ಅಥವಾ 24M ಎಂದು ನಮೂದಿಸಿರುತ್ತದೆ. ಇದನ್ನು ಉತ್ಪನ್ನ ತೆರೆದ ಬಳಿಕ ಬಳಸಬಹುದಾದ ಅವಧಿ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, 12M ಎಂದರೆ ಉತ್ಪನ್ನವನ್ನು ಮೊದಲ ಬಾರಿ ತೆರೆದ ದಿನದಿಂದ 12 ತಿಂಗಳವರೆಗೆ ಬಳಸಲು ಶಿಫಾರಸು ಮಾಡಲಾಗಿದೆ ಎಂದರ್ಥ. ಖರೀದಿಸಿದ ದಿನದಿಂದ ಈ ಅವಧಿ ಲೆಕ್ಕ ಹಾಕುವುದಿಲ್ಲ. ತೆರೆದ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಬಳಕೆಯ ಅವಧಿಯನ್ನು ನಿರ್ಧರಿಸಬೇಕು.

ತೆರೆಯದ ಉತ್ಪನ್ನಗಳನ್ನು ತಂಪಾದ, ಒಣ ಸ್ಥಳದಲ್ಲಿ ಸರಿಯಾಗಿ ಸಂಗ್ರಹಿಸಿದರೆ ಸಾಮಾನ್ಯವಾಗಿ ಎರಡರಿಂದ ಮೂರು ವರ್ಷಗಳವರೆಗೆ ಗುಣಮಟ್ಟ ಉಳಿಸಿಕೊಳ್ಳಬಹುದು. ಆದರೆ, ಅತಿಯಾದ ಉಷ್ಣತೆ, ತೇವಾಂಶ ಮತ್ತು ನೇರ ಸೂರ್ಯನ ಬೆಳಕು ಅವುಗಳ ಬಾಳಿಕೆಯನ್ನು ಕಡಿಮೆ ಮಾಡಬಹುದು. ಅಚ್ಚರಿಯ ಸಂಗತಿಯೆಂದರೆ, ಮೇಕಪ್‌ ಉತ್ಪನ್ನಗಳನ್ನು ಇಡಲು ಹಲವರು ಆಯ್ಕೆ ಮಾಡುವ ಸ್ನಾನಗೃಹವೇ ಅವುಗಳನ್ನು ಸಂಗ್ರಹಿಸಲು ಸೂಕ್ತವಲ್ಲ. ಸ್ನಾನ ಮಾಡುವಾಗ ಉಂಟಾಗುವ ಬಿಸಿ ಮತ್ತು ತೇವಾಂಶ ಉತ್ಪನ್ನಗಳ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು.

ಮೇಕಪ್‌ ಬಳಸುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯಬೇಡಿ

ಅವಧಿ ಮೀರಿದ ಪ್ರತಿಯೊಂದು ಉತ್ಪನ್ನವೂ ಅನಿವಾರ್ಯವಾಗಿ ಹಾನಿ ಉಂಟುಮಾಡುತ್ತದೆ ಎಂದರ್ಥವಲ್ಲ. ಕೆಲವರು ಹಳೆಯ ಲಿಪ್‌ಸ್ಟಿಕ್‌ ಬಳಸಿದರೂ ಯಾವುದೇ ತೊಂದರೆ ಅನುಭವಿಸದೇ ಇರಬಹುದು. ಆದರೆ, ಸಮಸ್ಯೆ ಎದುರಾಗುವುದಿಲ್ಲ ಎಂಬ ಖಾತರಿ ಇದರಿಂದ ಸಿಗುವುದಿಲ್ಲ. ವಿಶೇಷವಾಗಿ ಕಣ್ಣು, ತುಟಿ ಮತ್ತು ಗಾಯಗೊಂಡ ಚರ್ಮದ ಮೇಲೆ ಬಳಸುವ ಉತ್ಪನ್ನಗಳ ವಿಚಾರದಲ್ಲಿ ಹೆಚ್ಚು ಜಾಗರೂಕತೆ ವಹಿಸಬೇಕು.

ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಈ ಅಪಾಯವನ್ನು ಕಡಿಮೆ ಮಾಡಬಹುದು. ಹೊಸ ಸೌಂದರ್ಯವರ್ಧಕವನ್ನು ತೆರೆದ ದಿನಾಂಕವನ್ನು ಅದರ ಪ್ಯಾಕ್‌ ಮೇಲೆ ಬರೆದು ಇಡಿ. ಮೇಕಪ್‌ ಬ್ರಷ್‌ಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ. ಕಣ್ಣು ಮತ್ತು ತುಟಿಗಳಿಗೆ ಬಳಸುವ ಉತ್ಪನ್ನಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.

ಉತ್ಪನ್ನದ ವಾಸನೆ ಬದಲಾಗಿದ್ದರೆ, ಬಣ್ಣ ಅಥವಾ ವಿನ್ಯಾಸದಲ್ಲಿ ವ್ಯತ್ಯಾಸ ಕಂಡುಬಂದರೆ, ಅದು ಬೇರ್ಪಟ್ಟಿದ್ದರೆ ಅಥವಾ ಮೊದಲಿನಂತೆ ಬಳಕೆಯಾಗದಿದ್ದರೆ ತಕ್ಷಣವೇ ಬಿಸಾಡಿ. ಒಣಗಿದ ಮಸ್ಕರಾಕ್ಕೆ ನೀರು ಅಥವಾ ಜೆಲ್ ಸೇರಿಸಿ ಬಳಸಬೇಡಿ. ಚರ್ಮ ಅಥವಾ ಕಣ್ಣಿನಲ್ಲಿ ಉರಿ, ಕೆಂಪಾಗುವಿಕೆ, ಊತ ಅಥವಾ ಸೋಂಕಿನ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

ಸೌಂದರ್ಯ ಎಂಬುದು ಆರೋಗ್ಯಕರ ಚರ್ಮದಿಂದ ಬರುತ್ತದೆಯೇ ಹೊರತು ಹಳೆಯ ಮೇಕಪ್‌ನಿಂದಲ್ಲ. ಅಲ್ಪ ಹಣವನ್ನು ಉಳಿಸುವ ಆಸೆಯಿಂದ ಅವಧಿ ಮೀರಿದ ಉತ್ಪನ್ನಗಳನ್ನು ಬಳಸಿ, ನಂತರ ದುಬಾರಿ ವೈದ್ಯಕೀಯ ಚಿಕಿತ್ಸೆ ಮತ್ತು ಶಾಶ್ವತ ಚರ್ಮದ ಕಲೆಗಳಿಗೆ ತುತ್ತಾಗುವುದು ಖಂಡಿತವಾಗಿಯೂ ಜಾಣತನವಲ್ಲ. ಹೀಗಾಗಿ ಇಂದೇ ನಿಮ್ಮ ಮೇಕಪ್ ಬ್ಯಾಗ್ ಅನ್ನು ಪರಿಶೀಲಿಸಿ, ಹಳೆಯ ಉತ್ಪನ್ನಗಳಿಗೆ ವಿದಾಯ ಹೇಳಿ, ನಿಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘INDIA ಒಕ್ಕೂಟದ ವಿಭಜನೆಗೆ ಅವರೇ ಕಾರಣ’: ಸೋನಿಯಾ ಗಾಂಧಿ ಆತ್ಮಕಥನದಲ್ಲಿ ನಿತೀಶ್ ಕುಮಾರ್‌ಗೆ ಅಪಮಾನ?; JDU ತೀವ್ರ ಆಕ್ರೋಶ..!

Babri ಧ್ವಂಸದ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೆ: ಇಂದಿರಾ ಹತ್ಯೆ ನಂತರ ಪ್ರತಿಕ್ಷಣವೂ ಭಯದಲ್ಲೇ ಬದುಕಿದ್ದೆವು: ‘Belonging’ ಆತ್ಮಚರಿತ್ರೆಯಲ್ಲಿ ಹಳೇ ನೆನಪುಗಳ ಕೆದಕಿದ ಸೋನಿಯಾ ಗಾಂಧಿ..!

'2 ರೂಪಾಯಿ ವಿಮರ್ಶಕ'.. 'ಬಂಗಲೆ ಕಟ್ಟಿಕೊಂಡಿದ್ದಾನೆ'!; KRKಗೆ ರಾಮಾಯಣ ನಿರ್ದೇಶಕರಿಂದ ಲೀಗಲ್ ನೋಟಿಸ್, ನೆಟ್ಟಿಗರ ತಿರುಗೇಟು

Mother Dairy: ಮತ್ತೆ ಹಾಲಿನ ದರ ಏರಿಕೆ, ಲೀಟರ್`ಗೆ ಬರೊಬ್ಬರಿ 4 ರೂ ಹೆಚ್ಚಳ, ನಾಳೆಯಿಂದಲೇ ನೂತನ ದರ ಜಾರಿ!

ಪವನ್ ಕಲ್ಯಾಣ್‌ ವಿಚ್ಚೇದನ: ಘೋಷಣೆಗೂ ತಿಂಗಳ ಹಿಂದಷ್ಟೇ ಹೆಸರು ಬದಲಿಸಿಕೊಂಡಿದ್ದ ಅನ್ನಾ, ಕೊನಿಡೆಲಾ ಮನೆತನದ ಹೆಸರು ಸೇರ್ಪಡೆ!