Gold Purity Check: ಯುದ್ಧ ಹಾಗೂ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ, ದಿನದಿಂದ ದಿನಕ್ಕೆ ಭಾರೀ ಏರಿಕೆ ಆಗುತಿರುವ ಈ ಸಮಯದಲ್ಲಿ ಬಂಗಾರದ ರೇಟ್ ಕೊಂಚ ಕಡಿಮೆ ಆಯ್ತು ಅಂದ ತಕ್ಷಣವೇ ಗ್ರಾಹಕರು ದೊಡ್ಡ ಮಟ್ಟದಲ್ಲಿ ಖರೀದಿಗೆ ಮುಂದಾಗುತ್ತಾರೆ. ಆದರೆ, ಹೀಗೆ ಖರೀದಿ ಮಾಡುವ ವೇಳೆ, ನಾವು ಪರ್ಚೇಸ್ ಮಾಡುವ ವೇಳೆ ಎಲ್ಲರಿಗೂ ಕಾಡುವ ದೊಡ್ಡ ಭಯವೆಂದರೆ, ಆ ಚಿನ್ನ ಅಸಲಿಯೋ ನಕಲಿಯೋ ಎಂಬುದು.! ಅಂಗಡಿಯವರು ಹೇಳಿದ ಕ್ಯಾರೆಟ್ ನಷ್ಟು ಶುದ್ಧತೆ ಇದೆಯೋ ಇಲ್ಲವೋ ಎಂದು ತಿಳಿಯದೆ ಅನೇಕರು ಮೋಸ ಹೋಗುತ್ತಾರೆ. ಆದರೆ ಚಿನ್ನದ ಶುದ್ಧತೆಯನ್ನು ಪತ್ತೆ ಹಚ್ಚಲು ಕೆಲವು ಸುಲಭ ವಿಧಾನಗಳಿವೆ. ಆ ಕುರಿತ ಮಾಹಿತಿ ಈ ವರದಿಯಲ್ಲಿದೆ:
ಹಾಲ್‌ಮಾರ್ಕ್ ಪರಿಶೀಲನೆ (ಅತ್ಯಂತ ನಂಬಿಕಸ್ಥ ವಿಧಾನ)
ಚಿನ್ನದ ಆಭರಣಗಳ ಒಳಭಾಗದಲ್ಲಿರುವ ಮುದ್ರೆಗಳನ್ನು ಗಮನಿಸಿ.
ಭಾರತದಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಮೂರು ಪ್ರಮುಖ ಗುರುತುಗಳನ್ನು ಕಡ್ಡಾಯಗೊಳಿಸಿದೆ:
BIS ಲೋಗೋ: ತ್ರಿಕೋನಾಕಾರದ ಮುದ್ರೆ.
ಶುದ್ಧತೆಯ ಗ್ರೇಡ್: 22 ಕ್ಯಾರೆಟ್ ಚಿನ್ನಕ್ಕೆ 22K916, 18 ಕ್ಯಾರೆಟ್ ಚಿನ್ನಕ್ಕೆ 18K750 ಮತ್ತು 14 ಕ್ಯಾರೆಟ್ ಚಿನ್ನಕ್ಕೆ 14K585 ಎಂದು ಬರೆಯಲಾಗಿರುತ್ತದೆ.
HUID ಸಂಖ್ಯೆ: ಆರು ಅಕ್ಷರಗಳ ವಿಶಿಷ್ಟ ಆಲ್ಫಾನ್ಯೂಮರಿಕ್ ಕೋಡ್ (ಉದಾಹರಣೆಗೆ: A1B2C3).
ನೀವು 'BIS CARE' ಮೊಬೈಲ್ ಆಪ್ ಡೌನ್‌ಲೋಡ್ ಮಾಡಿ, ಈ HUID ನಂಬರ್ ಹಾಕಿದರೆ ಆ ಚಿನ್ನವನ್ನು ಎಲ್ಲಿ ತಯಾರಿಸಲಾಯಿತು ಮತ್ತು ಅದು ಎಷ್ಟು ಶುದ್ಧವಾಗಿದೆ ಎಂಬ ಸಂಪೂರ್ಣ ವಿವರ ಸಿಗುತ್ತದೆ.
ಮನೆಯಲ್ಲೇ ಮಾಡಬಹುದಾದ ಸರಳ ಪರೀಕ್ಷೆಗಳು:
ಕಾಂತೀಯ ಪರೀಕ್ಷೆ: ಶುದ್ಧ ಚಿನ್ನಕ್ಕೆ ಆಯಸ್ಕಾಂತೀಯ ಗುಣ ಇರುವುದಿಲ್ಲ. ಒಂದು ಬಲಿಷ್ಠವಾದ ಆಯಸ್ಕಾಂತವನ್ನು ಚಿನ್ನದ ಹತ್ತಿರ ತಂದಾಗ ಅದು ಚಿನ್ನವನ್ನು ಆಕರ್ಷಿಸಿದರೆ, ಅದರಲ್ಲಿ ಕಬ್ಬಿಣ ಅಥವಾ ಇನ್ಯಾವುದೋ ಇತರೆ ಅಶುದ್ಧ ಲೋಹಗಳು ಬೆರೆತಿವೆ ಎಂದರ್ಥ.
ನೀರಿನ ಪರೀಕ್ಷೆ: ಶುದ್ಧ ಚಿನ್ನವು ತುಂಬಾ ಭಾರವಾಗಿರುತ್ತದೆ. ಒಂದು ಗ್ಲಾಸ್ ನೀರಿಗೆ ಚಿನ್ನದ ಆಭರಣವನ್ನು ಹಾಕಿದಾಗ ಅದು ನೇರವಾಗಿ ತಳಕ್ಕೆ ಹೋಗಿ ಕುಳಿತುಕೊಳ್ಳಬೇಕು. ಒಂದು ವೇಳೆ ಅದು ನೀರಿನ ಮೇಲೆ ತೇಲಿದರೆ ಅಥವಾ ಅರ್ಧಕ್ಕೆ ನಿಂತರೆ ಅದು ನಕಲಿ ಚಿನ್ನವಾಗಿರಬಹುದು.
ವಿನೆಗರ್ ಪರೀಕ್ಷೆ: ಆಭರಣದ ಮೇಲೆ ಒಂದೆರಡು ಹನಿ ಬಿಳಿ ವಿನೆಗರ್ ಹಾಕಿ ಸ್ವಲ್ಪ ಸಮಯ ಗಮನಿಸಿ. ಚಿನ್ನದ ಬಣ್ಣ ಕಪ್ಪಾಗಿದ್ದರೆ ಅಥವಾ ಬದಲಾದರೆ ಅದು ನಕಲಿ. ಶುದ್ಧ ಚಿನ್ನದ ಬಣ್ಣ ಎಂದಿಗೂ ಬದಲಾಗುವುದಿಲ್ಲ.
ಸಿರಾಮಿಕ್ ಪ್ಲೇಟ್ ಪರೀಕ್ಷೆ: ಪಾಲಿಶ್ ಮಾಡದ ಸಿರಾಮಿಕ್ ಪ್ಲೇಟ್ ಅಥವಾ ಕಲ್ಲಿನ ಮೇಲೆ ಚಿನ್ನವನ್ನು ಲಘುವಾಗಿ ಉಜ್ಜಿ ನೋಡಿ. ಅದು ಪ್ಲೇಟ್ ಮೇಲೆ ಚಿನ್ನದ ಬಣ್ಣದ (ಹಳದಿ) ಗೆರೆಯನ್ನು ಮೂಡಿಸಿದರೆ ಅದು ಅಸಲಿ. ಕಪ್ಪು ಗೆರೆ ಮೂಡಿದರೆ ಅದು ನಕಲಿ.
ಇದರೊಂದಿಗೆ,
ಆಸಿಡ್ ಪರೀಕ್ಷೆ: ಜ್ಯುವೆಲ್ಲರಿ ಅಂಗಡಿಗಳಲ್ಲಿ ನೈಟ್ರಿಕ್ ಆಸಿಡ್ ಬಳಸಿ ಚಿನ್ನವನ್ನು ಪರೀಕ್ಷಿಸುತ್ತಾರೆ. ನೈಟ್ರಿಕ್ ಆಸಿಡ್ ಹಾಕಿದಾಗ ಚಿನ್ನದ ಬಣ್ಣ ಹಸಿರಾದರೆ ಅದು ತಾಮ್ರ ಅಥವಾ ಗಿಲ್ಟ್ ಒಡವೆ ಎಂದರ್ಥ. ಬಣ್ಣ ಬದಲಾಗದಿದ್ದರೆ ಅದು ಅಪ್ಪಟ ಚಿನ್ನ.
ಕರಾಟ್ ಮೀಟರ್ ಪರೀಕ್ಷೆ: ದೊಡ್ಡ ದೊಡ್ಡ ಚಿನ್ನದ ಅಂಗಡಿಗಳಲ್ಲಿ ಕರಾಟ್ ಮೀಟರ್ ಯಂತ್ರಗಳಿರುತ್ತವೆ. ಇವು ಯಾವುದೇ ಹಾನಿ ಮಾಡದೆ ಎಕ್ಸ್-ರೇ ಕಿರಣಗಳ ಮೂಲಕ ಚಿನ್ನದಲ್ಲಿ ಎಷ್ಟು ಪ್ರಮಾಣದ ಶುದ್ಧ ಚಿನ್ನವಿದೆ (ಉದಾಹರಣೆಗೆ 91.6%) ಎಂಬುದನ್ನು ಕೆಲವೇ ಸೆಕೆಂಡುಗಳಲ್ಲಿ ನಿಖರವಾಗಿ ತೋರಿಸುತ್ತವೆ.