ಕ್ಷೀರಕ್ರಾಂತಿಗೆ ಆಧುನಿಕ ತಂತ್ರಜ್ಞಾನ ಮೊರೆ
ಬೆಂಗಳೂರು: ಹೆಣ್ಣು ಹುಟ್ಟಿದರೆ ಹೀಗಳೆಯುವವರು ಇರುವಾಗಲೇ, ಜಾನುವಾರು ಜಗತ್ತಿನಲ್ಲಿ ಗಂಡು ವಂಶವನ್ನೇ ಇನ್ನಿಲ್ಲದಂತೆ ಮಾಡಲು ಕೆಎಂಎಫ್ ಮುಂದಾಗಿದೆ. ಜಾನುವಾರುಗಿಳಿಗಿನ್ನು ಹೆಣ್ಗರು ಮಾತ್ರ ಹುಟ್ಟುವಂತೆ ಮಾಡಲು ಆಧುನಿಕ ತಂತ್ರಜ್ಞಾನದ ಮೊರೆ ಹೋಗಲಾಗಿದೆ.
ರೈತರ ಆರ್ಥಿಕ ಅಭಿವೃದ್ಧಿ ಹಾಗೂ ಕ್ಷೀರ ಕ್ಷೇತ್ರದ ಪ್ರಗತಿಯ ದೃಷ್ಟಿಯಿಂದ ಹೆಣ್ಗರು ಮಾತ್ರವೇ ಜನಿಸುವಂತೆ ಮಾಡಲು ವಿಶೇಷ ವೀರ್ಯ (ಸೆಕ್ಷೆಡ್ ಸೆಮೆನ್) ಬಳಕೆಗೆ ಕೆಎಂಎಫ್ ಚಿಂತಿಸಿದೆ. ಈ ಪ್ರಯೋಗಗಳು ಐರೋಪ್ಯ ದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದು, ದೇಶದ ಪಂಜಾಬ್ನಲ್ಲಿಯೂ ಯಶಸ್ವಿಯಾಗಿದೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಕೆಎಂಎಫ್ ಸಹ ಈ ಪ್ರಯೋಗಕ್ಕೆ ನಾಂದಿ ಹಾಡಲು ಜಿಲ್ಲಾ ಒಕ್ಕೂಟಗಳ ಅಧ್ಯಕ್ಷರು ಹಾಗೂ ರೈತರ ಸಭೆ ನಡೆಸುತ್ತಿದೆ.
ಈ ವಿಶೇಷ ವೀರ್ಯ ಪ್ರಯೋಗಕ್ಕೆ ಒಳಪಡಿಸುವ ಹಸು ದೃಢಕಾಯ ಹಾಗೂ ಹೆಚ್ಚು ಹಾಲು ನೀಡುವಷ್ಟು ಸಮರ್ಥವಿರಬೇಕು. ಹಾಗೆಯೇ ಅದರ ಮಾಲೀಕನೂ ಹಸುವಿಗೆ ಅಗತ್ಯ ಪೌಷ್ಠಿಕ ಆಹಾರ ನೀಡುವಷ್ಟು ಚೈತನ್ಯ ಉಳ್ಳವನಾಗಿರಬೇಕು. ಈ ಬಗ್ಗೆ ಕೆಎಂಎಫ್ ಹೆಚ್ಚಿನ ಮಾಹಿತಿ ಸಂಗ್ರಹಿಸಲಿದೆ. ಈ ವಿನೂತನ ಪ್ರಯೋಗದ ಬಗ್ಗೆ ರೈತರೊಂದಿಗೆ ಕೆಎಂಎಫ್ ಅಧಿಕಾರಿಗಳು ಚಿಂತಿಸುತ್ತಿದ್ದಾರೆ.
ಪ್ರಥಮ ಪ್ರಯೋಗ ಜರ್ಸಿ ಮೇಲೆ
ರಾಜ್ಯದಲ್ಲಿರುವ 75 ಲಕ್ಷ ಜಾನುವಾರುಗಳಲ್ಲಿ 45 ಲಕ್ಷಕ್ಕೂ ಹೆಚ್ಚು ಹಸುಗಳಿವೆ. ಅವುಗಳಲ್ಲಿ 14.5 ಲಕ್ಷ ಹಸುಗಳು ಮಾತ್ರ ಗರ್ಭ ಧರಿಸಲು ಯೋಗ್ಯವಾಗಿವೆ. ನಂದಿನಿ ವೀರ್ಯಕೇಂದ್ರದಿಂದ ಟ್ಯೂಬ್ಗೆ 25 ನೀಡಿ ರೈತರು ಖರೀದಿಸುತ್ತಿರುವ ವೀರ್ಯದಿಂದ ಹೆಚ್ಚು ಹೆಣ್ಗರು ಜನಿಸುತ್ತಿಲ್ಲ. ಹುಟ್ಟುವ ಗಂಡು ಕರುಗಳನ್ನು ಸಾಕಲಾಗದೇ ಮಾರುತ್ತಿದ್ದಾರೆ. ಅದಕ್ಕೆ ಹೆಣ್ಗರುಗಳ ಸಂಖ್ಯೆಯನ್ನು ಹೆಚ್ಚಿಸಿ, ಹೈನುಗಾರಿಕೆ ಅಭಿವೃದ್ಧಿಗೊಳಿಸಲು ವಿಶೇಷ ವೀರ್ಯ ಪ್ರಯೋಗ ಅನಿವಾರ್ಯವೆಂದು ಕೆಎಂಎಫ್ ಚಿಂತಿಸುತ್ತಿದೆ.
ಹೆಚ್ಚು ಹಾಲು ನೀಡುತ್ತಿರುವ ಜರ್ಸಿ, ಎಚ್ಎಫ್ಎಲ್ ಜರ್ಸಿ ಸೇರಿದಂತೆ ಕೆಲವೇ ಆಯ್ದ ತಳಿಯ ಹಸುಗಳ ಮೇಲೆ ಈ ವಿಶೇಷ ಪ್ರಯೋಗ ನಡೆಸಲು ತೀರ್ಮಾನಿಸಲಾಗಿದೆ. ಹಾಗೆಯೇ ಪ್ರಾಯೋಗಿಕವಾಗಿ ಇದನ್ನು ಕೆಲವೇ ಜಿಲ್ಲೆಗಳಲ್ಲಿ ಆರಂಭಿಸಿ, ಯಶಸ್ವಿಯಾದರೆ ಇತರೆ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತದೆ.
ವೀರ್ಯ ಪ್ರಯೋಗ?
ಹೆಚ್ಚು ಹಾಲು ಉತ್ಪಾದಿಸುವ ತಳಿಯ ಹೋರಿಗಳ ವೀರ್ಯವನ್ನು ಸಂಗ್ರಹಿಸಿ, ಹೆಣ್ಣು ಸಂತತಿಗೆ ನೆರವಾಗುವ ಕ್ರೊಮೋಸೋಮ್ಗಳನ್ನು ಪ್ರತ್ಯೇಕಗೊಳಿಸಲಾಗುತ್ತದೆ. ಅದನ್ನು ವೀರ್ಯ ನಳಿಕೆಯಲ್ಲಿ ಸಂಗ್ರಹಿಸಲಾಗುತ್ತದೆ.
ಹೀಗೆ ಸಂಗ್ರಹಿಸಿದ ವಿಶೇಷ ವೀರ್ಯವನ್ನೇ ಹಸುವಿನ ಅಂಡಾಶಯಕ್ಕೆ ನಳಿಕೆ ಮೂಲಕ ಸೇರಿಸಲಾಗುತ್ತದೆ. ಈ ಪ್ರಯೋಗಕ್ಕೆ ಒಳಗಾಗುವ ಹಸುವಿಗೆ ಹೆಣ್ಗರುವೇ ಜನಿಸುತ್ತದೆ. ಶೇ.95ರಷ್ಟು ಯಶಸ್ವಿಯಾಗಬಹುದಾದ ಇದನ್ನು ಪಶು ಸಂಗೋಪನಾ ವೈದ್ಯರು ಹಾಗೂ ಆ ಕ್ಷೇತ್ರದ ತಜ್ಞರು ಮಾತ್ರ ಪ್ರಯೋಗಿಸಬಹುದು.
ಆದರೆ, ಈ ಪ್ರಯೋಗಕ್ಕೆ ಬಳಸುವ ವೀರ್ಯ ತುಂಬಾ ದುಬಾರಿ. ವಿದೇಶ ಕಂಪನಿಗಳು ಅನೇಕ ಪ್ರಯೋಗಗಳ ಮೂಲಕ ಪರೀಕ್ಷಿಸಿ, ಸಿದ್ಧಪಡಿಸಿರುವುದರಿಂದ ಒಂದು ಟ್ಯೂಬ್ ವೀರ್ಯಕ್ಕೆ 1500ವರೆಗೂ ಬೆಲೆ ಇರುತ್ತದೆ. ಆ ಮಾದರಿಯಿಂದ ಹುಟ್ಟುವ ಕರು ಹೆಚ್ಚು ಹಾಲನ್ನೂ ಕೊಡುತ್ತದೆ.
ವಿಶೇಷ ವೀರ್ಯ ಬಳಸಿ ಹೆಣ್ಗರು ಜನಿಸುವಂತೆ ಮಾಡುವ ವೀರ್ಯ ಸಂಗ್ರಹ ಸಂಸ್ಥೆಗಳ ಜತೆ ಮಾತನಾಡಬೇಕಿದ್ದು, ಪ್ರಯೋಗ ಸದ್ಯದಲ್ಲೇ ಆರಂಭವಾಗುತ್ತದೆ. ಇದರಿಂದ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿ ರೈತರು ಆರ್ಥಿಕವಾಗಿ ಬೆಳೆಯಲಿದ್ದಾರೆ.
ಪಿ.ನಾಗರಾಜ್, ಕೆಎಂಎಫ್ ಅಧ್ಯಕ್ಷ
- ಶಿವಕುಮಾರ್ ಬೆಳ್ಳತಟ್ಟೆ