ನವದೆಹಲಿ: ವಾಜಪೇಯಿ ಕಾಲಾವಧಿಯಲ್ಲೇ ಭೂಗತ ದೊರೆ ದಾವೂದ್ ಇಬ್ರಾಹಿಂ ನನ್ನು ಸದೆಬಡಿಯುವ ರಹಸ್ಯ ಯೋಜನೆಯೊಂದನ್ನು ರೂಪಿಸಲಾಗಿತ್ತು. ಆದರೆ, ಮುಂಬೈ ಪೊಲೀಸ್‍ನ ಕೆಲ ಭ್ರಷ್ಟ ಅಧಿಕಾರಿಗಳೇ ಈ ಕಾರ್ಯಾಚರಣೆ ಯನ್ನು ವಿಫಲಗೊಳಿಸಿದರು...! ನಿವೃತ್ತ ಗೃಹ ಕಾರ್ಯದರ್ಶಿ, ಬಿಜೆಪಿ ಸಂಸದ ಮುಖಂಡ ಆರ್.ಕೆ. ಸಿಂಗ್ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಈ ಆಘಾತಕಾರಿ ಮಾಹಿತಿಯನ್ನು ಹೊರಗೆಡವಿದ್ದಾರೆ.
ದಾವೂದ್ ಇಬ್ರಾಹಿಂನನ್ನು ಹಿಡಿಯಲು ವಿರೋಧಿ ಚೋಟಾ ರಾಜನ್ ಗ್ಯಾಂಗ್ ನಲ್ಲಿ ಕೆಲವರ ನ್ನು ಆಯ್ಕೆ ಮಾಡಿ ಗುಪ್ತ ಸ್ಥಳದಲ್ಲಿ ತರಬೇತಿ ನೀಡಲಾಗುತ್ತಿತ್ತು. ಆದರೆ, ಮುಂಬೈ ಪೊಲೀಸ್ ಇಲಾಖೆಯಲ್ಲಿ ದಾವೂದ್ ಕಾಸಿಗೆ ಕೈವೊಡ್ಡುವ ಕೆಲವು ಪೊಲೀಸರು ಈ ಕಾರ್ಯಾಚರಣೆ ವಿಫಲಗೊಳಿಸಿದರು.
ಬಂಧನ ವಾರೆಂಟ್ ಹಿಡಿದುಕೊಂಡು ತರಬೇತಿ ಸ್ಥಳಕ್ಕೆ ತೆರಳಿ ಎಲ್ಲರನ್ನು ವಶಕ್ಕೆ ತೆಗೆದುಕೊಂಡರು ಎಂದು ಆರ್.ಕೆ. ಸಿಂಗ್ ದೂರಿದ್ದಾರೆ. ದಾವೂದ್‍ನ ಕುರಿತ ದಾಖಲೆ ಪಾಕ್ ಗೆ ನೀಡುವುದರಿಂದ ಪ್ರಯೋಜನ ಇಲ್ಲ. ಆತನನ್ನು ಸದೆಬಡಿಯಲು ರಹಸ್ಯ ಕಾರ್ಯಾಚರಣೆ ನಡೆಸಬೇಕು. ನಾವು ಎಷ್ಟೇ ದಾಖಲೆ ಕೊಟ್ಟರೂ ದಾವೂದ್ ತಮ್ಮ ದೇಶದಲ್ಲಿಲ್ಲ ಎಂದು ಪಾಕ್ ನಾಚಿಕೆಬಿಟ್ಟು ನಿರಾಕರಿಸಿ ಬಿಡುತ್ತದೆ ಎಂದೂ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಷರತ್ತು ಹಾಕಿದ್ದು ತಪ್ಪೆಂದ ಪಾಕ್
ಮಾತುಕತೆ ರದ್ದಾಗಲು ಭಾರತವೇ ಕಾರಣ ಎಂದು ಪಾಕ್ ಮಾಧ್ಯಮ ಆರೋಪಿಸಿವೆ. ಮಾತುಕತೆಗೆ ಪೂರ್ವ ಷರತ್ತು ವಿಧಿಸಿದ್ದು ಸರಿಯಲ್ಲ. ಇದರಿಂದ ಎರಡೂ ದೇಶಗಳ ನಡುವಿನ ಸಂಬಂಧ ಸಹಜ ಸ್ಥಿತಿಗೆ ಮರಳುವಂತೆ ಮಾಡಲು ಒದಗಿ ಬಂದಿದ್ ಅವಕಾಶ ತಪ್ಪಿಹೋಯಿತು ಎಂದು ಅಲ್ಲಿನ ಬಹುತೇಕ ಇಂಗ್ಲಿಷ್ ಮಾಧ್ಯಮ ದೂರಿವೆ. ಮಾತುಕತೆ ವಿಚಾರದಲ್ಲಿ ಭಾರತ ಗಂಭೀರವಾಗಿಯೇ ಇಲ್ಲ. ಸುಖಾ ಸುಮ್ಮನೆ ಅದು ನಾಟಕವಾಡಿತು ಎಂದು ಪಾಕ್‍ನ ಉರ್ದು ಮಾಧ್ಯಮ ಆರೋಪಿಸಿವೆ.
ದಾವೂದ್‍ನ ಠಿಕಾಣಿ ಬದಲು!
ಭೂಗತ ದೊರೆ ದಾವೂದ್‍ನ ನಿವಾಸದ ಕುರಿತು ಭಾರತೀಯ ಮಾಧ್ಯಮದಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ವಿಚಲಿತಗೊಂಡ ಪಾಕಿಸ್ತಾನ ಆತನನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. ಮೂಲಗಳ ಪ್ರಕಾರ, ದಾವೂದ್‍ನನ್ನು ಭಾನುವಾರವೇ ಕರಾಚಿಯಿಂದ ಹೊರಗಿರುವ ಮುರ್ರಿಯಲ್ಲಿರುವ ಐಎಸ್‍ಐನ ಸುರಕ್ಷಿತ ಠಿಕಾಣಿಗೆ ರವಾನಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಪಾಕ್ ಸೇನೆಯ ವಾಹನದಲ್ಲೇ ಆತನನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಆದರೆ, ಈ ಮಾಹಿತಿ ಭಾರತೀಯ ಗುಪ್ತಚರದಳಕ್ಕೆ ಸಿಕ್ಕಿದೆ ಎಂದು ಆಜ್‍ತಕ್ ವರದಿ ಮಾಡಿದೆ.