ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡಿರುವ ಬಿಜೆಪಿ ಪಕ್ಷಕ್ಕೆ ವಿಪಕ್ಷ ಸ್ಥಾನ ನೀಡುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಇಂದು ಮಾತನಾಡಿದ ಕೇಜ್ರಿವಾಲ್ ಅವರು, ವಿಧಾನಸಭೆಯಲ್ಲಿ ಬಿಜೆಪಿ 7 ಸ್ಥಾನಕ್ಕಿಂತಲೂ ಕಡಿಮೆ ಸ್ಥಾನ ಗೆದ್ದರೂ ಕೂಡಾ ವಿಪಕ್ಷ ಸ್ಥಾನ ನೀಡುತ್ತೇವೆ ಎಂದು ಉದಾರವಾಗಿ ಹೇಳಿದ್ದಾರೆ. ಇದೇ ರೀತಿಯ ಅಭಿಪ್ರಾಯವನ್ನು ಆಪ್ ಪಕ್ಷದ ಮತ್ತೋರ್ವ ಮುಖಂಡ ಕುಮಾರ್ ವಿಶ್ವಾಸ್ ಕೂಡ ವ್ಯಕ್ತಪಡಿಸಿದರು.
ಒಟ್ಟು 70 ಸ್ಥಾನಗಳನ್ನು ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಅಧಿಕೃತ ವಿರೋಧ ಪಕ್ಷ ಸ್ಥಾನಮಾನ ಲಭಿಸಲು ಶೇ.10ರಷ್ಟು ಸ್ಥಾನಗಳನ್ನು ಅಂದರೆ ಕನಿಷ್ಟ 7 ಸ್ಥಾನಗಳನ್ನು ಹೊಂದಿರಬೇಕು. ಆದರೆ ಪ್ರಸ್ತುತ ದೆಹಲಿ ಚುನಾವಣೆಯಲ್ಲಿ ಆಪ್ ಪಕ್ಷ ಬರೋಬ್ಬರಿ 67 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದು, ಬಿಜೆಪಿ ಕೇವಲ 3 ಸ್ಥಾನಗಳಿಗೇ ಮುಗ್ಗರಿಸಿದೆ. ಹೀಗಾಗಿ ಬಿಜೆಪಿ ಪಕ್ಷಕ್ಕೆ ಕನಿಷ್ಠ ವಿರೋಧ ಪಕ್ಷದಲ್ಲಿ ಕೂರುವ ಅವಕಾಶ ಕೂಡ ಇಲ್ಲದಂತಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಲೆಕ್ಕಚಾರ ಸಂಪೂರ್ಣ ತಲೆಕೆಳಗಾಗಿದ್ದು, ಇದೀಗ ಕೇಜ್ರಿವಾಲ್ ಅಲೆಯ ಹೊಡೆತಕ್ಕೆ ಬಿಜೆಪಿ ಕೂಡಾ ಧೂಳೀಪಟವಾಗಿದೆ. 2013ರ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಪಡೆದಿತ್ತು. ಆದರೆ ಈ ಬಾರಿ ಜನರ ತೀರ್ಪು ಬಿಜೆಪಿ ಮತ್ತು ಕಾಂಗ್ರೆಸ್ ಗೆ ವಿರುದ್ಧವಾಗಿ ಬಿದ್ದಿದ್ದು, ಇಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.