ಪುಣೆ: ಬಜೆಟ್‍ಗೂ ಮುನ್ನವೇ ಪ್ರಧಾನಿ ನರೇಂದ್ರಮೋದಿ ಅವರು ಇನ್ನಷ್ಟು ಸುಧಾರಣಾ ಕ್ರಮಗಳ ಭರವಸೆ ನೀಡಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಕೆಂಪುಹಾಸು ಹಾಸಿರುವ ಅವರು ಹೂಡಿಕೆದಾರರಿಗೆ ಅನುಕೂಲವಾಗುವಂತಹ ಹಲವು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪುಣೆಯಲ್ಲಿ ಅಮೆರಿಕದ ಎಂಜಿನಿಯರಿಂಗ್ ದಿಗ್ಗಜ ಜಿಇ ಕಾರ್ಪೊರೇಷನ್ ನಿರ್ಮಿಸಿರುವ ಬಹುಸ್ತರ ಉತ್ಪಾದನಾ ಘಟಕವನ್ನು ಶನಿವಾರ ಉದ್ಘಾಟಿಸಿದ ಪ್ರಧಾನಿ ಮೋದಿ, ದೇಶದಲ್ಲಿರುವ ಯುವಜನರ ಪ್ರತಿಭೆಯನ್ನು ಬಳಸಿಕೊಳ್ಳುವಂತೆ ಹೂಡಿಕೆದಾರರಿಗೆ ಕರೆ ನೀಡಿದ್ದಾರೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕೆಂದು ಬಯಸುವ ಎಲ್ಲರಿಗೂ ನಾನು ಹೇಳುವುದಿಷ್ಟೆ. ನಮ್ಮ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಿ. ಸ್ಪರ್ಧಾತ್ಮಕ ಉತ್ಪನ್ನಗಳನ್ನು ಉತ್ಪಾದಿಸಲು ನಮ್ಮ ಯುವಕರ ಪ್ರತಿಭೆಯನ್ನು ಬಳಸಿಕೊಳ್ಳಿ. ನಮ್ಮ ಅಭಿವೃದ್ಧಿಯಲ್ಲಿ ನಿಮ್ಮ(ಹೂಡಿಕೆದಾರರ) ಪ್ರಗತಿಯೂ ಸೇರಿದೆ ಎಂದಿದ್ದಾರೆ ಪ್ರಧಾನಿ.
ಭಾರತದ ಆರ್ಥಿಕತೆಯು ವಿಶ್ವದಲ್ಲೇ ಅತ್ಯಂತ ವೇಗದಲ್ಲಿ ಬೆಳವಣಿಗೆಯಾಗುತ್ತಿರುವ ಆರ್ಥಿಕತೆಯಾಗಿದೆ. ಅದನ್ನು ನಾವು ಕಾಪಾಡಿಕೊಳ್ಳಬೇಕೆಂದರೆ ಉತ್ಪಾದನೆ, ಕೃಷಿ ಮತ್ತು ಸೇವಾ ಕ್ಷೇತ್ರಕ್ಕೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಉತ್ತಮ ಆಡಳಿತವು ಅಭಿವೃದ್ಧಿಯ ಖಾತ್ರಿ ನೀಡುತ್ತದೆ ಎಂದು ನಾನು ನಂಬಿದ್ದೇನೆ. ಹಾಗಾಗಿ ಹೂಡಿಕೆಯನ್ನು ಆಕರ್ಷಿಸುವುದಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ ಎಂದೂ ಮೋದಿ ಹೇಳಿದ್ದಾರೆ.
ವೇದಿಕೆ ಹಂಚಿಕೊಂಡ ಮೋದಿ-ಪವಾರ್
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಪರಸ್ಪರ ಕಚ್ಚಾಡಿಕೊಂಡಿದ್ದ ಪ್ರಧಾನಿ ಮೋದಿ ಹಾಗೂ ಎನ್‍ಸಿಪಿ ನಾಯಕ ಶರದ್ ಪವಾರ್ ಶನಿವಾರ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಮಧ್ಯಾಹ್ನದ ಭೋಜನವನ್ನೂ ಇಬ್ಬರು ನಾಯಕರೂ ಒಟ್ಟಿಗೇ ಮಾಡಿದರು. ಈ ಮೂಲಕ ಅವರು ಮಹಾರಾಷ್ಟ್ರದಲ್ಲಿ ಹೊಸ ರಾಜಕೀಯ ಮೈತ್ರಿ ಬಗ್ಗೆ ಊಹಾ ಪೋಹ ಏಳುವಂತೆ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ, ಶಿವಸೇನೆ ಆಗಾಗ್ಗೆ ಬಿಜೆಪಿಯನ್ನು ಕುಟುಕುತ್ತಿರುವುದು ಗೊತ್ತಿರುವ ವಿಚಾರ.
ಹೀಗಾಗಿ ಶಿವಸೇನೆಗೆ ಪರ್ಯಾಯವಾಗಿ ಎನ್‍ಸಿಪಿಯನ್ನು ಬಳಸಿಕೊಳ್ಳುವ ಬಿಜೆಪಿ ಕಾರ್ಯತಂತ್ರವೂ ಇದಾಗಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಪವಾರ್ ಕುಟುಂಬದ ವಿದ್ಯಾ ಪ್ರತಿಶತನ್‍ಗೆ ಭೇಟಿ ನೀಡಿದ ಮೋದಿ, ನಂತರ ಪವಾರ್ ಸಹೋದರನ ಹೆಸರಿನಲ್ಲಿರುವ ಅಪ್ಪಾಸಾಹೇಬ್ ಪವಾರ್ ಆಡಿಟೋರಿಯಂನ ಉದ್ಘಾಟನೆಯನ್ನೂ ನೆರವೇರಿಸಿದರು. ಈ ವೇಳೆ, ಮೋದಿ ಅವರು ಪವಾರ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ನಮ್ಮ ರಾಜಕೀಯ ಯೋಚನೆಗಳು ಭಿನ್ನವಾಗಿದ್ದರೂ ನಮ್ಮ ಉದ್ದೇಶ ಒಂದೇ-ದೇಶದ ಅಭಿವೃದ್ದಿ ಎಂದರು. ಪವಾರ್ ಕೂಡ, ಮೋದಿ ಸರ್ಕಾರದ ಅಭಿವೃದ್ಧಿ ಅಜೆಂಡಾವನ್ನು ಬೆಂಬಲಿಸಿದರು.