ನವದೆಹಲಿ: ದೂರದರ್ಶನದ ಕಿಸಾನ್ ವಾಹಿನಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಟ ಅಮಿತಾಬ್ ರು.6.1 ಕೋಟಿ ಭಾರಿ ಮೊತ್ತವನ್ನು ಸಂಭಾವನೆಯಾಗಿ ಪಡೆದಿದ್ದರೆಂಬ ಸುದ್ದಿಯ ಬಗ್ಗೆ ಅವರ ಕಚೇರಿಯಿಂದ ಅಧಿಕೃತ ಪ್ರತಿಕ್ರಿಯೆ ಬಂದಿದ್ದು, ಖುದ್ದು ಬಚ್ಚನ್ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.
``ದೂರದರ್ಶನದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಹಣವನ್ನೂ ಪಡೆದಿಲ್ಲ ಎಂದು ಈ ಮೂಲಕ ತಿಳಿಸಲಿಚ್ಛಿಸುತ್ತೇನೆ'' ಎಂದು ಬಿಗ್‍ಬಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದು, ``ಡಿಡಿ ಕಿಸಾನ್ ಗಾಗಿ ಲೋವ್ ಲಿಂಟಾಸ್‍ರ ಜಾಹೀರಾತು ಕಂಪನಿಯೊಂದಿಗೆ ಕೆಲಸ ಮಾಡಿರುವುದು ಹೌದು ಆದರೆ ಅಲ್ಲಿಯೂ ಪ್ರಸಾರಭಾರತಿ ಮತ್ತು ಲೋವ್ ನಡುವೆ ಯಾವ ಗುತ್ತಿಗೆ ಒಪ್ಪಂದಗಳೂ ಇರಲಿಲ್ಲ. ಕೆಲವೊಂದನ್ನು ನಾನು ಕೇವಲ ಒಳ್ಳೆಯ ಕೆಲಸ ಎಂಬ ಕಾರಣಕ್ಕೆ ಒಪ್ಪಿಕೊಳ್ಳುತ್ತೇನೆ. ಡಿಡಿ ಕಿಸಾನ್ ಕೂಡ ಅವುಗಳಲ್ಲೊಂದು'' ಎಂದು ಬಚ್ಚನ್ ವಿವಾದಕ್ಕೆ ತೆರೆಯೆಳೆಯುವ ಪ್ರಯತ್ನ ಮಾಡಿದ್ದಾರೆ.