ಕಾಬುಲ್: ಶಸ್ತ್ರಸಜ್ಜಿತ ಮುಸುಕುದಾರಿ ವ್ಯಕ್ತಿಗಳು ಖಾಸಗಿ ಬಸ್ ಮೇಲೆ ದಾಳಿ ಗುಂಡಿನ ದಾಳಿ ಮಾಡಿದ್ದು, 13 ಮಂದಿ ಪ್ರಯಾಣಿಕರನ್ನು ಧಾರುಣವಾಗಿ ಹತ್ಯೆ ಮಾಡಿದ್ದಾರೆ.
ಆಫ್ಘಾನಿಸ್ತಾನದ ಕಾಬುಲ್ ಸಮೀಪವಿರುವ ವಾರ್ಡಕ್ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದ್ದು, ದಾಳಿಗೆ ಆಫ್ಘನ್ ಪ್ರಧಾನಿ ಅಶ್ರಫ್ ಘನಿ ಅವರು ವಾಷಿಂಗ್ ಟನ್ ನೊಂದಿಗೆ ನಡೆಸುತ್ತಿರುವ ಮಾತುಕತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಅಮೆರಿಕ ರಾಷ್ಟ್ರದೊಂದಿಗೆ ಯಾವುದೇ ರೀತಿಯ ಸಂಬಂಧ ಹೊಂದಬಾರದು ಎಂದು ಆಗ್ರಹಿಸಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ವಾರ್ಡಕ್ ಪ್ರಾಂತ್ಯದ ಗವರ್ನರ್ ಅತಾವುಲ್ಲಾಹ್ ಖೋಗ್ಯಾನಿ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪೊಂದು ಈ ಕುಕೃತ್ಯವೆಸಗಿದೆ. ರಾತ್ರಿ ಸುಮಾರು 1 ಗಂಟೆಯ ಹೊತ್ತಿನಲ್ಲಿ ಬಸ್ ಮೇಲೆ ದಾಳಿ ಮಾಡಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ 13 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಹಲವು ದಶಕಗಳಿಂದ ಆಫ್ಘಾನಿಸ್ತಾನದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವ ಅಮೆರಿಕ ಭದ್ರತಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಕುರಿತು ಮಂಗಳವಾರ ಆಫ್ಗನ್ ಅಧ್ಯಕ್ಷ ಘನಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಚರ್ಚೆ ನಡೆಸಿದ್ದರು. ಈಗಾಗಲೇ ಆಫ್ಘನ್ ನಲ್ಲಿರುವ ತಮ್ಮ ಭದ್ರತಾಪಡೆಯ ಯೋಧರನ್ನು ಅಮೆರಿಕಕ್ಕೆ ವಾಪಸ್ ಕರೆಸಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರಸ್ತುತ ಆಫ್ಘಾನಿಸ್ತಾನದ ಗಡಿ ಪ್ರದೇಶದಲ್ಲಿರುವ ಮೂಲಭೂತವಾದಿಗಳ ಪ್ರದೇಶದಲ್ಲಿ ಸುಮಾರು 10 ಸಾವಿರ ಅಮೆರಿಕ ಸೈನಿಕರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಮುಂಬರುವ 2016ರ ಅಂತ್ಯದಲ್ಲಿ ಉಳಿದ 10 ಸಾವಿರ ಸೈನಿಕರನ್ನು ಕೂಡ ಅಮೆರಿಕ ವಾಪಸ್ ಕರೆಸಿಕೊಳ್ಳಲಿದೆ ಎಂದು ತಿಳಿದುಹಬಂದಿದೆ.