ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ಬುಧವಾರ ಉಗ್ರರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಟ್ಯಾಂಗ್ ಧರ ಸೇನಾ ಶಿಬಿರದ ಮೇಲೆ ಎಕೆ 47 ಮತ್ತು ರಾಕೆಟ್ ಲಾಂಚರ್ ಗಳನ್ನು ಹೊತ್ತಿದ್ದ ಉಗ್ರರು ದಾಳಿ ನಡೆಸಿದ್ದು, ಉಗ್ರರಿಗೆ ಯೋಧರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ. ಘಟನೆಯಲ್ಲಿ ಸಾವು-ನೋವುಗಳಾದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲವಾದರೂ, ಘಟನಾ ಸ್ಥಳಕ್ಕೆ ಹಿರಿಯ ಸೇನಾಧಿಕಾರಿಗಳು ದೌಡಾಯಿಸಿದ್ದಾರೆ.
ಸೇನಾ ಮೂಲಗಳ ಪ್ರಕಾರ ಕಲ್ಸೂರಿ ರಿಡ್ಜ್ ನಲ್ಲಿರುವ ಟ್ಯಾಂಗ್ ಧರ್ ಸೆಕ್ಟರ್ ನಲ್ಲಿ ಮುಂಜಾನೆ ಈ ದಾಳಿ ನಡೆಸಿದ್ದು, ಸೇನೆ ಮತ್ತು ಉಗ್ರರ ನಡುವೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಟ್ಯಾಂಗ್ ಧರ್ ಸೆಕ್ಟರ್ ಕುಪ್ವಾರ ಜಿಲ್ಲೆಗೆ ಅತ್ಯಂತ ಸಮೀಪದಲ್ಲಿದ್ದು, ಭಾರತದ ಗಡಿಯೊಳಗೆ ನುಸುಳಲು ಇದು ಉತ್ತಮ ದಾರಿಯಾಗಿದೆ ಎಂದು ಉಗ್ರರು ಭಾವಿಸಿದಂತಿದೆ. ಇದೇ ಕಾರಣಕ್ಕೆ ಉಗ್ರರು ಇಲ್ಲಿ ದಾಳಿ ನಡೆಸಿರಬಹುದು ಸೇನಾಧಿಕಾರಿಗಳು ತಿಳಿಸಿದ್ದಾರೆ.