ಲಖನೌ: ದೇಶಾದಾದ್ಯಂತ ಹಲವು ವಿವಾದಗಳನ್ನೇ ಸೃಷ್ಟಿ ಮಾಡಿರುವ ದಾದ್ರಿ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣ ಸಂಬಂಧ ನಡೆಯುತ್ತಿರುವ ರಾಜಕೀಯ ಆರೋಪ ಹಾಗೂ ಪ್ರತ್ಯಾರೋಪಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯದಲ್ಲಿನ ಪ್ರತಿಯೊಬ್ಬರ ಪ್ರಮುಖ ಜವಾಬ್ದಾರಿ ಎಂದು ಶುಕ್ರವಾರ ಹೇಳಿದ್ದಾರೆ.
ದಾದ್ರಿ ಘಟನೆಗೆ ಕೇಂದ್ರ ಸರ್ಕಾರದ ಧೋರಣೆಯೇ ಕಾರಣ ಎಂದು ಕೆಲ ರಾಜಕೀಯ ಮುಖಂಡರುಗಳು ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಅವರು, ದಾದ್ರಿ ಪ್ರಕರಣವೊಂದು ಕಾನೂನು ಸುವ್ಯವಸ್ಥೆ ವಿಷಯವಾಗಿದ್ದು, ಈ ಪ್ರಕರಣ ನೇರವಾಗಿ ರಾಜ್ಯಕ್ಕೆ ಸಂಬಂಧಪಟ್ಟಿದ್ದಾಗಿದೆ. ಪ್ರಕರಣವನ್ನು ಇತ್ಯರ್ಥಗೊಳಿಸುವುದು ಆ ರಾಜ್ಯ ಸರ್ಕಾರದ ಪ್ರಮುಖ ಜವಾಬ್ದಾರಿ. ರಾಜ್ಯ ಸರ್ಕಾರ ಕೇಂದ್ರದಿಂದ ಸಹಾಯ ಕೇಳಿದರೆ, ಅವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಅದನ್ನು ಬಿಟ್ಟು ಕೇಂದ್ರವೇ ನೇರವಾಗಿ ರಾಜ್ಯ ಸರ್ಕಾರ ವಿಷಯಗಳಿಗೆ ತಲೆದೋರಲು ನಮ್ಮ ಸಂವಿಧಾನ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ ಎಂಬ ಆರೋಪಗಳ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಬಿಜೆಪಿ ಎಂದಿಗೂ ಜಾತಿ ಮತ್ತು ಧರ್ಮದ ರಾಜಕೀಯ ಮಾಡಿಲ್ಲ. ಇಲ್ಲಸಲ್ಲದ ಆರೋಪಗಳನ್ನು ಕೆಲವು ನಾಯಕರು ಮಾಡುತ್ತಿದ್ದು ಕೋಮು ಸಾಮರಸ್ಯ ಹದಗೆಡಿಸಲು ಕೆಲವರು ಪ್ರಯತ್ನ ನಡೆಸುತ್ತಿದ್ದಾರೆ. ಆರೋಗ್ಯಯುತ ಪ್ರಜಾಪ್ರಭುತ್ವದಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದು ಹೇಳಿದ್ದಾರೆ.