ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಭಾರತ, ಅಮೇರಿಕಾ, ಜಪಾನ್ ರಾಷ್ಟ್ರಗಳು ಜಂಟಿ ಸೇನಾ ಕಾರ್ಯಾಚರಣೆ(ತಾಲೀಮು) ನಡೆಸುತ್ತಿರುವುದರ ಬಗ್ಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತದ ಪೂರ್ವ ತೀರದಲ್ಲಿ ಜಪಾನ್ ಅಮೆರಿಕದೊಂದಿಗೆ ಭಾರತ ನೌಕಾ ಕಾರ್ಯಾಚರಣೆ ನಡೆಸುತ್ತಿರುವುದು ಮೂರು ರಾಷ್ಟ್ರಗಳ ಆಯಕಟ್ಟಿನ ಸಂಬಂಧಗಳು ಬಲಗೊಳ್ಳುತ್ತಿರುವುದರ ಸೂಚನೆ ಎಂದೇ ವಿಶ್ಲೇಷಿಸಲಾಗಿದೆ. ಸೋಮವಾರದವರೆಗೆ ಕಾರ್ಯಾಚರಣೆ ನಡೆಯಲಿದ್ದು ಅಮೇರಿಕಾ ಕ್ಷಿಪಣಿ ಕ್ರೂಸರ್ ಮತ್ತು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಯುಎಸ್ಎಸ್ ಥಿಯೋಡರ್ ರೂಸ್ವೆಲ್ಟ್ ನ್ನು ನಿಯೋಜಿಸಿದೆ.
ಭಾರತ- ಜಪಾನ್ ರಾಷ್ಟ್ರಗಳು ಅಮೆರಿಕಾಗೆ ರಕ್ಷಣಾ ಕ್ಷೇತ್ರದ ಅದ್ಭುತ ಪಾಲುದಾರರು ಎಂದು ಯುಎಸ್ಎಸ್ ಥಿಯೋಡರ್ ರೂಸ್ವೆಲ್ಟ್ ಕಮಾಂಡಿಂಗ್ ಅಧಿಕಾರಿ ಕ್ಯಾಪ್ಟನ್ ಕ್ರೇಗ್ ಕ್ಲಾಪ್ಪರ್ಟನ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಚೀನಾ ಸರ್ಕಾರಿ ಪತ್ರಿಕೆ ಪ್ರತಿಕ್ರಿಯಿಸಿದ್ದು, ಭಾರತ ಚೀನಾ ವಿರೋಧಿ ರಾಷ್ಟ್ರಗಳ ಮೈತ್ರಿಗೆ ಒಳಗಾಗಬಾರದೆಂದು ಎಚ್ಚರಿಕೆ ನೀಡಿದೆ.
ಭಾರತ-ಚೀನಾ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿದೆ. ಉತ್ತಮ ದ್ವಿಪಕ್ಷೀಯ ಸಂಬಂಧ ಮುಂದುವರೆಯುವುದು ಉಭಯ ರಾಷ್ಟ್ರಗಳಿಗೂ ಒಳಿತು ಭಾರತವನ್ನು ಚೀನಾ ವಿರೋಧಿ ಮೈತ್ರಿಗೆ ಎಳೆಯುವ ಶಕ್ತಿಗಳ ಬಗ್ಗೆ ಭಾರತ ಎಚ್ಚರವಾಗಿರಬೇಕು ಎಂದು ಗ್ಲೋಬಲ್ ಟೈಮ್ಸ್ ಬರೆದಿದೆ.
ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಜಪಾನ್, ಚೀನಾ ನಡುವೆ ವಿವಾದ ಇದ್ದು, ಭಾರತದ ಪೂರ್ವ ತೀರದಲ್ಲಿ ಅಮೆರಿಕಾ ಭಾರತದೊಂದಿಗೆ ಜಪಾನ್ ನೌಕಾ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದೆ.