ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಬಂಧನ ಬಳಿಕ ಎಲ್ಲರ ಗಮನ ಇದೀಗ ದಾವೂದ್ ಇಬ್ರಾಹಿಂ ಮೇಲೆ ಹರಿದಿದ್ದು, ಆತನ ಬಂಧನಕ್ಕಾಗಿಯೂ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಛೋಟಾ ರಾಜನ್ ನಂತರ 1993ರ ಮುಂಬೈ ಸರಣಿ ಸ್ಫೋಟದ ಆರೋಪಿ ದಾವೂದ್ ಇಬ್ರಾಹಿಂ ನಮ್ಮ ಟಾರ್ಗೆಟ್ ಆಗಿದ್ದು, ಶೀಘ್ರದಲ್ಲಿಯೇ ಆತನನ್ನು ಬಂಧಿಸಲಾಗುತ್ತದೆ. ಈಗಾಗಲೇ ಈ ಕುರಿತು ಕ್ರಮ ಕೈಗೊಳ್ಳಲಾಗಿದ್ದು, ಪಾಕಿಸ್ತಾನದ ಕರಾಚಿಯಲ್ಲಿ ಅಡಗಿ ಕುಳಿತಿರುವ ಭೂಗತ ಪಾತಕಿಯನ್ನು ಕೂಡ ಛೋಟಾ ರಾಜನ್ ರೀತಿಯಲ್ಲೇ ಬಂಧಿಸಿ ಭಾರತಕ್ಕೆ ಕರೆತರಲಾಗುವುದು ಎಂದು ಕಿರಣ್ ರಿಜಿಜು ಹೇಳಿದ್ದಾರೆ.
ಸುಮಾರು 20ಕ್ಕೂ ಅಧಿಕ ಕೊಲೆ ಪ್ರಕರಣ, ಗಲಭೆ, ಹಿಂಸಾಚಾರ, ಬೆದರಿಕೆ ಪ್ರಕರಣಗಳನ್ನು ಮೈಮೇಲೆ ಹೊತ್ತುಕೊಂಡಿರುವ 55 ವರ್ಷದ ರಾಜನ್ ಅಲಿಯಾಸ್ ರಾಜೇಂದ್ರ ಸದಾಶಿವ್ ನಿಕ್ಲಾಜೆಯನ್ನು ಭಾರತಕ್ಕೆ ಕರೆ ತರುವ ಪ್ರಕ್ರಿಯೆ ಆರಂಭವಾಗಿದೆ. ಇಂಡೋನೇಷ್ಯಾದ ಪೊಲೀಸರ ವಶದಲ್ಲಿರುವ ಛೋಟಾ ರಾಜನ್‌ನನ್ನು ಭಾರತಕ್ಕೆ ಕರೆ ತರಲು ಸಿಬಿಐ ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಆ ದೇಶದ ಕಾನೂನು ಪ್ರಕ್ರಿಯೆ ಮುಗಿಯುವ ತನಕ ನಾವು ಕಾಯಬೇಕಾಗುತ್ತದೆ ಎಂದು ರಿಜಿಜು ಇದೇ ವೇಳೆ ಸ್ಪಷ್ಟಪಡಿಸಿದರು.
ಇತ್ತೀಚೆಗೆ ಭಾರತ ಹಾಗೂ ಇಂಡೋನೇಷ್ಯಾ ನಡುವೆ ಆಗಿರುವ ಒಪ್ಪಂದದಂತೆ ಕ್ರಿಮಿನಲ್‌ಗಳನ್ನು ಕೋರ್ಟ್ ವಾರೆಂಟ್ ಆಧಾರದ ಮೇಲೆ ಹಸ್ತಾಂತರ ಮಾಡವ ಸಾಧ್ಯತೆ ಇದೆ.