ನವದೆಹಲಿ: ಗೌರಿ ಗಣೇಶ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಭರಪೂರ ಉಡುಗೊರೆ ಸಿಕ್ಕಿದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ.6ರಷ್ಟು ಹೆಚ್ಚಳ ಮಾಡಿದೆ.
ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಶೇ.6ರಷ್ಟುಹೆಚ್ಚಳದೊಂದಿಗೆಕೇಂದ್ರ ನೌಕರರ ತುಟ್ಟಿಭತ್ಯೆ ಮೂಲ ವೇತನದ ಶೇ.119ಕ್ಕೆ ಏರಿದೆ. ಕಳೆದ ಏಪ್ರಿಲ್ ತಿಂಗಳಲ್ಲಷ್ಟೆ ಶೇ.6ರಷ್ಟು ತುಟ್ಟಿಭತ್ಯೆ ಹೆಚ್ಚಿಸಲಾಗಿತ್ತು. ಕೇಂದ್ರದ ಈ ನಿರ್ಧಾರದಿಂದಾಗಿ 45 ಲಕ್ಷ ನೌಕರರು, 50 ಲಕ್ಷ ಪಿಂಚಣಿದಾರರಿಗೆಲಾಭವಾಗಲಿದೆ. ಅತ್ತ ಚುನಾವಣಾ ಆಯೋಗ ಬಿಹಾರ ಚುನಾವಣೆ ವೇಳಾಪಟ್ಟಿ ಪ್ರಕಟಿಸುವ ಮುನ್ನ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳ ಪ್ರಕಟಿಸಿತು.
ಸ್ಪೆಕ್ಟ್ರಂ ನಿಯಮಕ್ಕೆ ಒಪ್ಪಿಗೆ: ದೂರಸಂಪರ್ಕ ಸೇವಾ ಕಂಪನಿಗಳು ತಮ್ಮ ಬಳಿ ಇರುವ ಹೆಚ್ಚುವರಿ ಸ್ಪೆಕ್ಟ್ರಂ ಮಾರಾಟ ಮಾಡುವುದಕ್ಕೆ ಅನುಕೂಲವಾಗುವಂತೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ನೂತನ ನಿಯಮದ ಪ್ರಕಾರ, ಯಾವುದೇ ದೂರಸಂಪರ್ಕ ಕಂಪನಿ ತನ್ನಲ್ಲಿರುವ ತರಂಗಾಂತರಗಳನ್ನು ಬೇರೆ ಕಂಪನಿಗೆ ಮಾರಾಟ ಮಾಡಬಹುದಾಗಿದೆ. ಈ ನಿರ್ಧಾರದಿಂದಾಗಿ ಕಂಪನಿಗಳು ತಾವು ಬಳಸದೇ ಇರುವ ತರಂಗಾಂತರಗಳನ್ನು ಬೇರೆ ಕಂಪನಿಗೆ ಮಾರಾಟ ಮಾಡಬಹುದು ಮತ್ತು ತಮಗೆ ಬೇಕಾದ ತರಂಗಾಂತರಗಳನ್ನು ಖರೀದಿಸಬಹುದಾಗಿದೆ. ಈ ವಹಿವಾಟಿಗೆ ಸರ್ಕಾರದ ಯಾವುದೇ ಪೂರ್ವಾನುಮತಿ ಬೇಕಿಲ್ಲ. ಆದರೆ, ವಹಿವಾಟು ನಿಯಮಾನುಸಾರ ಇರಬೇಕು ಮತ್ತು 45 ದಿನಗಳ ಮುಂಚಿತವಾಗಿ ಸರ್ಕಾರದ ಗಮನಕ್ಕೆ ತರಬೇಕು ಎಂದು ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್ ತಿಳಿಸಿದ್ದಾರೆ.
ಖರೀದಿಸುವರು ಶೇ.1ರಷ್ಟು ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕಾದ್ದರಿಂದ ತರಂಗಾಂತರ ವಹಿವಾಟಿನಿಂದ ಹೆಚ್ಚುವರಿ ಆದಾಯ ಬರಲಿದೆ. ತರಂಗಾಂತರ ಇದ್ದರೂ ಗ್ರಾಹಕರ ಸಂಖ್ಯೆ ಕಡಿಮೆ ಇರುವ ಕಂಪನಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ರವಿಶಂಕರ್ ಪ್ರಸಾದ್ ತಿಳಿಸಿದರು.