ನಲ್ಬರಿ(ಅಸ್ಸಾಂ): ಪ್ರಧಾನಿ ನರೇಂದ್ರ ಮೋದಿಯ ಎರಡು ವರ್ಷದ ಆಡಳಿತದ ಲೆಕ್ಕ ಪತ್ರ ಕೇಳಿದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ಇದು ಲೋಕಸಭೆ ಚುನಾವಣೆಯಲ್ಲ, ವಿಧಾನಸಭೆ ಚುನಾವಣೆ ಎಂದು ತಿರುಗೇಟು ನೀಡಿದ್ದಾರೆ.
ಎರಡನೇ ಹಾಗೂ ಅಂತಿಮ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರ್ಯಾಲಿ ಉದ್ಘಾಟಿಸಿ ಮಾತನಾಡಿದ ಶಾ, ಪ್ರಧಾನಿ ಮೋದಿಗೆ ನೀವು ಎರಡು ವರ್ಷದ ಆಡಳಿತಾವಧಿಯ ಲೆಕ್ಕಪತ್ರ ಕೇಳುವುದು ತರವಲ್ಲ. ಇದು ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ನಾವು ಮತದಾರರಿಗೆ ಸಮಗ್ರ ಲೆಕ್ಕಪತ್ರ ನೀಡುತ್ತೇವೆ ಎಂದರು.
ಅಸ್ಸಾಂ ಮತದಾರರು ಸುಮಾರು 15 ವರ್ಷಗಳ ಕಾಲ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ. ಅಲ್ಲದೆ ಪ್ರಧಾನಿಯಾಗಿದ್ದ ಮನಮೋಹನ್ಸಿಂಗ್ ಅವರಿಗೂ 10 ವರ್ಷ ಆಶೀರ್ವದಿಸಿದ್ದಾರೆ. ಈ ಜನ ಈಗ ನಿಮಗೇ ಲೆಕ್ಕ ಕೇಳುವ ಮನೋಸ್ಥಿತಿಯಲ್ಲಿದ್ದಾರೆ ಎಂದು ಶಾ ವಾಗ್ದಾಳಿ ನಡೆಸಿದರು
ಬಿಜೆಪಿ-ಎಜಿಪಿ ಸಂಯುಕ್ತವಾಗಿ ಈ ರಾಜ್ಯದಲ್ಲಿ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಲು ಸಜ್ಜಾಗಿದೆ. ಮುಕ್ತ ಮತ್ತು ಭ್ರಷ್ಟಾಚಾರ ರಹಿತ ಸರ್ಕಾರ ರಚಿಸಲಿಕ್ಕಾಗಿ ಜನತೆ ನಮಗೆ ಬೆಂಬಲಿಸಲಿದೆ ಎಂದ ಶಾ ವಿಶ್ವಾಸ ವ್ಯಕ್ತಪಡಿಸಿದರು.