ಬೀಡ್ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಸಂಭವಿಸಿದ್ದು, ಬಿಸಿಲಿನ ಧಗೆಗೆ 11 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಘಟನೆ ಬೀಡ್ ಜಿಲ್ಲೆಯ ಮರಾಠವಾಡದಲ್ಲಿ ಗುರುವಾರ ನಡೆದಿದೆ.
ವೀಡಾ ಗ್ರಾಮದ ಸಚಿನ್ ಗೋಪಿನಾಥ್ ಕೇದಾರ್ (11) ಸಾವಿನ್ನಪ್ಪಿದ ಬಾಲಕ. ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಬಾವಿಯಿಂದ ಬಾಲಕ ನೀರನ್ನು ತರಲು ಹೋಗಿದ್ದ. ಇದರಂತೆ ನೀರನ್ನು ಹೊತ್ತು ಬರುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದಾನೆ.
ಕೂಡಲೇ ಆತನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೂ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದನೆಂದು ತಿಳಿದುಬಂದಿದೆ. ಬಾಲಕನ ಸಾವಿಗೆ ಅತಿಯಾದ ಬಿಸಿಲು ಕಾರಣ ಹಾಗೂ ದೇಹದಲ್ಲಿನ ನಿರ್ಜಲೀಕರಣ ಕಾರಣವೆಂದು ಹೇಳಲಾಗುತ್ತಿದೆ.
ಕಳೆದೆರಡು ದಿನಗಳ ಹಿಂದಷ್ಟೇ ಇಂತಹುದ್ದೇ ಘಟನೆಯೊಂದು ನಡೆದಿತ್ತು. ನೀರು ತರಲು ಹೋಗಿದ್ದ 12 ವರ್ಷದ ಯೋಗಿತಾ ಅಶೋಕ್ ದೇಸಾಯಿ ಎಂಬ ಬಾಲಕಿ ಸಾವನ್ನಪ್ಪಿದ್ದಳು.