ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಬಹುಕೋಟಿ ವಿವಿಐಪಿ ಚಾಪರ್ ಖರೀದಿ ಪ್ರಕ್ರಿಯೆಯಲ್ಲಿ ನಡೆದಿದ್ದ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ನ್ಯಾಯಾಲಯ ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಿದ್ದು, ಖರೀದಿ ಪ್ರಕ್ರಿಯೆಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.
ಭಾರತದ ವಿವಿಐಪಿಗಳು ಪ್ರಯಾಣಿಸುವ ಸಲುವಾಗಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಸುಸಜ್ಜಿತ ಹೆಲಿಕಾಪ್ಟರ್ ಗಳ ಖರೀದಿಗೆ ಮುಂದಾಗಿತ್ತು. ಇದಕ್ಕಾಗಿ ಇಟಲಿ ಮೂಲದ ಅಗಸ್ಚಾ ವೆಸ್ಚ್ ಲ್ಯಾಂಡ್ ಮತ್ತು ಫಿನ್ ಮೆಕಾನಿಕಾ ಸಂಸ್ಥೆಗಳೊಂದಿಗೆ ಒಪ್ಪಂದ ಕೂಡ ಮಾಡಿಕೊಂಡಿತ್ತು. ಆದರೆ ಈ ಒಪ್ಪಂದ ವೇಳೆ ಭಾರಿ ಪ್ರಮಾಣದ ಕಿಕ್ ಬ್ಯಾಕ್ ನೀಡಲಾಗಿದೆ ಎಂಬ ಆರೋಪ ಇಟಲಿ ಸೇರಿದಂತೆ ಭಾರತ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಈ ಹೈ ವೋಲ್ಟೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಇಟಲಿ ನ್ಯಾಯಾಲಯ ತೀರ್ಪು ನೀಡಿದ್ದು, ಕಾಪ್ಟರ್ ಖರೀದಿ ಪ್ರಕ್ರಿಯೆಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂದು ತೀರ್ಪು ನೀಡಿದೆ. ಹಗರಣದಲ್ಲಿ ಸೋನಿಯಾ ಗಾಂಧಿ ನೇರವಾಗಿ ಭಾಗಿಯಾದ ಆರೋಪಿಯ ಲಿಖಿತ ಹೇಳಿಕೆ ಪ್ರಮುಖ ಸಾಕ್ಷ್ಯವಾಗಿದ್ದು, ಇದರಲ್ಲಿ ಸೋನಿಯಾ ಹೆಸರು ಉಲ್ಲೇಖವಾಗಿದೆ.
ಕೇವಲ ಸೋನಿಯಾಗಾಂಧಿ ಮಾತ್ರವಲ್ಲದೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಅಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಕೆ.ನಾರಾಯಣನ್, ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್ ಹಾಗೂ ಭಾರತೀಯ ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಕೂಡ ಅವ್ಯವಹಾರದ ಕಳಂಕ ಹೊತ್ತಿದ್ದಾರೆ. 2010ರಲ್ಲಿ ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ವೇಳೆ 3,600 ಕೋಟಿ ರು. ಅಕ್ರಮ ನಡೆದಿದೆ ಎಂದು ಇಟಲಿ ಕೋರ್ಟ್ ತೀರ್ಪು ನೀಡಿದೆ. ಅಂತೆಯೇ ಈ ಅವ್ಯವಹಾರದಲ್ಲಿ ಭಾರತೀಯ ಅಧಿಕಾರಿಗಳಿಗೆ ಸುಮಾರು 99.73 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಹೇಳಿದೆ.
ವಾಯು ಸೇನೆ ನಿವೃತ್ತ ಮುಖ್ಯಸ್ಥ ತ್ಯಾಗಿ ಕೂಡ ಹಗರಣದಲ್ಲಿ ಭಾಗಿ
ಇನ್ನು 1999ರಲ್ಲಿ ಭಾರತೀಯ ವಾಯು ಪಡೆ ವಿಐಪಿ ಹೆಲಿಕಾಪ್ಟರ್ ಎಂಐ-8 ಬದಲು ಹೊಸ ಹೆಲಿಕಾಪ್ಟರ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದರ ಕಾರ್ಯನಿರ್ವಹಣಾ ಅವಧಿ ಮುಗಿದಿತ್ತು. ಅಲ್ಲದೆ ರಾತ್ರಿ ವೇಳೆ ಓಡಾಟ ಮತ್ತು 2000 ಮೀಟರ್‌ಗಿಂತ ಎತ್ತರದ ಹಾರಾಟ ಇದರಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿ 6000 ಮೀಟರ್ ಎತ್ತರದಲ್ಲಿ ಹಾರಾಟ ನಡೆಸುವ ಹೆಲಿಕಾಪ್ಟರ್ ತಯಾರಿಸುವ ಸಂಸ್ಥೆಗಳನ್ನು ಆಹ್ವಾನಿಸಲಾಗಿತ್ತು.
ಆದರೆ ತ್ಯಾಗಿ ಹೆಲಿಕಾಪ್ಟರ್‌ನ ಗರಿಷ್ಠ ಎತ್ತರವನ್ನು 4500 ಮೀ.ಗೆ ಇಳಿಸಿದ್ದರಿಂದ ಅಗಸ್ಟಾ ವೆಸ್ಟ್‌ಲ್ಯಾಂಡ್ ಡೀಲ್ ಪಡೆದುಕೊಂಡಿತ್ತು. ಮೂಲಗಳ ಪ್ರಕಾರ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯೊಂದಿಗೆ ಖರೀದಿ ಒಪ್ಪಂದ ಕುದುರಿಸಲೆಂದೇ ಅಂದಿನ ವಾಯು ಸೇನೆ ಮುಖ್ಯಸ್ಥರು ಹೆಲಿಕಾಪ್ಟರ್ ನ ಹಾರಾಟದ ಎತ್ತರವನ್ನು ಕಡಿತಗೊಳಿಸದರು ಮತ್ತು ಇದಕ್ಕೆ ಭಾರಿ ಪ್ರಮಾಣದ ಕಿಕ್ ಬ್ಯಾಕ್ ಪಡೆದಿದ್ದರೂ ಎಂಬ ಆರೋಪಗಳು ಕೂಡ ಕೇಳಿ ಬಂದಿದೆ.