ನವದೆಹಲಿ: ಮಹಾತ್ಮಗಾಂಧಿ ಹತ್ಯೆ ಹಿಂದೆ ಆರ್'ಎಸ್ಎಸ್ ಪಾತ್ರವಿದೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಕೂಡಲೇ ಕ್ಷಮೆಯಾಚಿಸಬೇಕೆಂದು ಆರ್'ಎಸ್ಎಸ್ ಶನಿವಾರ ಆಗ್ರಹಿಸಿದೆ.
ಈ ಕುರಿತಂತೆ ಆರ್ ಎಸ್ಎಸ್ ತನ್ನ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದು, ಸುಳ್ಳು ಹೇಳುತ್ತಿರುವುದನ್ನು ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಯವರು ನಿಲ್ಲಿಸಬೇಕು ಮತ್ತು ತಮ್ಮ ಹೇಳಿಕೆಗೆ ಕೂಡಲೇ ಕ್ಷಮೆಯಾಚಿಸಬೇಕು. ಸತ್ಯಮೇವ ಜಯತೆ (ಸತ್ಯಕ್ಕೆ ಎಂದಿಗೂ ಜಯವಿದೆ) ಎಂದು ಹೇಳಿಕೊಂಡಿದೆ.
ಸತ್ಯದ ಮೇಲೆ ರಾಹುಲ್ ಗಾಂಧಿಯವರಿಗೆ ಹಾಗೂ ಕಾಂಗ್ರೆಸ್ ಗೆ ಗೌರವವಿರುವುದೇ ಆದರೆ, ತಮ್ಮ ಹೇಳಿಕೆಗೆ ಕೂಡಲೇ ಕ್ಷಮೆಯಾಚಿಸಲಿ. ಮುಂದೆ ಭವಿಷ್ಯದಲ್ಲಿ ಎಂದಿಗೂ ಸುಳ್ಳು ಹೇಳುವುದಿಲ್ಲ ಪ್ರಮಾಣ ಮಾಡಲಿ ಎಂದು ಹೇಳಿದೆ.
ಇದೇ ವೇಳೆ ರಾಹುಲ್ ವಿರುದ್ಧ ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರು ಕಿಡಿಕಾರಿದ್ದು, ರಾಜಕೀಯ ಲಾಭ ಪಡೆಯುವ ಸಲುವಾಗಿ ಕಾಂಗ್ರೆಸ್ ಇಲ್ಲಸಲ್ಲದ ವಿವಾದವನ್ನು ಸೃಷ್ಟಿಸುತ್ತಿದೆ. ಭಯೋತ್ಪಾದಕರ ಪರವಾಗಿರುವ ಮೃದು ಧೋರಣೆ ಹಾಗೂ ರಾಜಕೀಯ ಇಬ್ಬಾಗ ಮಾಡುವಂತಹ ಗುಣಗಳನ್ನು ಹೊಂದಿರುವ ಕಾಂಗ್ರೆಸ್ ಗೆ ಬಿಜೆಪಿ ಕುರಿತಂತೆ ವಿಮರ್ಶೆ ಮಾಡುವ ಯಾವುದೇ ಹಕ್ಕಿಲ್ಲ. ದ್ವೇಷ ಪೂರಿತ ಹಾಗೂ ಇಬ್ಬಾಗ ಮಾಡುವ ಕಾಂಗ್ರೆಸ್ ನ ಅಜೆಂಡಾ ವಿರುದ್ಧದ ಹೋರಾಟವನ್ನು ಬಿಜೆಪಿ ಎಂದಿಗೂ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು, ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಹಾತ್ಮಗಾಂಧಿಯವರ ಸಾವಿನ ಹಿಂದೆ ಆರ್ ಎಸ್ಎಸ್ ಕೈವಾಡಿವಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಂತೆ ರಾಹುಲ್ ವಿರುದ್ಧ ಆರ್ ಎಸ್ಎಸ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿತ್ತು. ಪ್ರಕರಣವನ್ನು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ರಾಹುಲ್ ವಿರುದ್ಧ ಕಿಡಿಕಾರಿತ್ತು.
ರಾಹುಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಚಾರವಾಗಿ ಕ್ಷಮೆ ಕೋರಲು ಅವರು ಸಿದ್ಧರಿಲ್ಲ. ಹಾಗಾಗಿ ವಿಚಾರಣೆ ಎದುರಿಸುವುದೇ ಸರಿ. ಒಂದು ಸಂಸ್ಥೆಯ ಬಗ್ಗೆ ದೂಷಣೆ ಮಾಡುವ ಹಕ್ಕು ರಾಹುಲ್ ಗೆ ಇಲ್ಲ ಎಂದು ಹೇಳಿತ್ತು.