ನವದೆಹಲಿ: ಮದುವೆಗೆ ನಿರಾಕರಿಸಿದ ಮಹಿಳೆಯೊಬ್ಬರಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವವಾಗಿ ದಹಿಸಿರುವ ಘಟನೆಯೊಂದು ರಾಜಧಾನಿ ದೆಹಲಿಯ ಭಲ್ಸ್'ವಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.
ಅಭಿಷೇಕ್ ಬೆಂಕಿ ಹಚ್ಚಿದ ದುಷ್ಕರ್ಮಿಯಾಗಿದ್ದಾನೆ. ಈತ ನೆರೆಮನೆಯಾತನೇ ಆಗಿದ್ದು, ಹಲವು ದಿನಗಳಿಂದಲೂ ಮಹಿಳೆಯ ಹಿಂದೆ ಹೋಗಿ ಹಿಂಸೆ ನೀಡುತ್ತಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಯಾವಾಗ ಮನೆಯಿಂದ ಹೊರ ಹೋದರೂ ತನ್ನ ಗೆಳೆಯರೊಂದಿಗೆ ಸೇರಿಕೊಂಡು ಅಭಿಷೇಕ್ ಆಕೆಗೆ ಹಿಂಸೆ ನೀಡುತ್ತಿದ್ದ. 7-10 ದಿನಗಳಿಂದಲೂ ಆಕೆ ತೊಂದರೆಯನ್ನು ಸಹಿಸಿಕೊಂಡು ಬಂದಿದ್ದಳು. ಆದರೆ, ಆತನ ವರ್ತನೆ ಅತಿಯಾದ ಹಿನ್ನೆಲೆ ಸಹಿಸಿಕೊಳ್ಳಲು ಸಾಧ್ಯವಾಗದೆ ಕೆಲ ದಿನಗಳ ಹಿಂದಷ್ಟೇ ತನ್ನ ಸಹೋದರ ಬಳಿ ಹೇಳಿಕೊಂಡಿದ್ದಳು. ನಂತರ ಆತ ಅಭಿಷೇಕ್ ಗೆ ಎಚ್ಚರಿಕೆ ನೀಡಿದ್ದ. ಇದಾದ ಬಳಿಕ ತೊಂದರೆ ನೀಡುವುದನ್ನು ನಿಲ್ಲಿಸಿದ್ದ. ಆದರೆ, ಮತ್ತೆ ತನ್ನ ದುರ್ವತನೆಯನ್ನು ಮುಂದುವರೆಸಿದ್ದ ಎಂದು ಮಹಿಳೆಯ ಸಂಬಂಧಿಕರಾದ ಗೀತಾ ಎಂಬುವವರು ಹೇಳಿದ್ದಾರೆ.
ನಿನ್ನೆ 20-25 ಯುವಕರೊಂದಿಗೆ ಮನೆಗೆ ಬಂದಿದ್ದ ಅಭಿಷೇಕ್ ಇದ್ದಕ್ಕಿದ್ದಂತೆ ಕುಟುಂಬಸ್ಥರಿಗೆ ರಾಡ್ ನಿಂದ ಹೊಡೆಯಲು ಆರಂಭಿಸಿದ್ದ. ಯುವತಿಯನ್ನು ಕರೆತಂದು ಬೆದರಿಕೆ ಹಾಕಿದ. ಈ ವೇಳೆ ಆಕೆ ಮದುವೆಗೆ ನಿರಾಕರಿಸಿದ್ದಳು. ಇದಕ್ಕೆ ತೀವ್ರವಾಗಿ ಕೋಪಗೊಂಡ ಆತ ಸೀಮೆಎಣ್ಣೆಯನ್ನು ತಂದು ಆಕೆಯ ಮೇಲೆ ಹಾಕಿ ಬೆಂಕಿ ಹಚ್ಚಿದ.
ನನ್ನ ಸ್ವಂತವಾಗದ ನಿನ್ನನ್ನು ಬೇರಾರ ಸ್ವಂತವಾಗಲು ನಾನು ಬಿಡುವುದಿಲ್ಲ. ಬೇರಾರನ್ನೂ ನೀನು ಮದುವೆಯಾಗಬಾರದು ಎಂದು ಹೇಳಿ ಯುವತಿಯ ಕುಟುಂಬಸ್ಥರ ಕಣ್ಣ ಎದುರಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಯುವತಿ ಬದುಕುಳಿಯುವ ಸಾಧ್ಯತೆಗಳು ಅತ್ಯಂತ ಕಡಿಮೆಯಿದೆ. ಆಕೆಯ ದೇಹ ಶೇ.95 ರಷ್ಟು ಸುಟ್ಟು ಹೋಗಿದೆ ಎಂದು ಗೀತಾ ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಸೆಕ್ಷನ್ 307,452, 323, ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.