ದೇಶ

ಹಣದ ಕೊರೆತೆಯಿಂದಾಗಿ ಉಗ್ರರು ಬ್ಯಾಂಕ್ ದರೋಡೆ ಮಾಡುತ್ತಿದ್ದಾರೆ: ಪೊಲೀಸರು

Manjula VN

ಶ್ರೀನಗರ:  ರು.500 ಹಾಗೂ 1,000 ದುಬಾರಿ ಮುಖಬೆಲೆಯ ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಬಳಿಕ ಉಗ್ರ ಸಂಘಟನೆಗಳಿಗೆ ನಗದು ಬಿಕ್ಕಟ್ಟು ಎದುರಾಗಿದ್ದು, ಹಣಕ್ಕಾಗಿ ಉಗ್ರರು ಜಮ್ಮು ಕಾಶ್ಮೀರದ ಬ್ಯಾಂಕ್ ಗಳಲ್ಲಿ ದರೋಡೆ ಮಾಡುತ್ತಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಶ್ರೀನಗರದ ಬ್ಯಾಂಕ್ ಗಳಲ್ಲಿ ಹೆಚ್ಚುತ್ತಿರುವ ದರೋಡೆ ಪ್ರಕರಣಗಳ ಕುರಿತಂತೆ ಮಾತನಾಡಿರುವ ವಿಶೇಷ ಡಿಜಿಪಿ ಎಸ್ ಪಿ ವೈದ್ ಅವರು, ರು.500 ಹಾಗೂ 1,000 ನೋಟುಗಳ ಮೇಲೆ ನಿಷೇಧ ಹೇರಿದ ಬಳಿಕ ಉಗ್ರ ಸಂಘಟನೆಗಳಿಗೆ ಹಣದ ಕೊರತೆ ಎದುರಾಗಿದೆ. ನಗದು ಬಿಕ್ಕಟ್ಟಿನಿಂದಾಗಿ ಹಣಕ್ಕಾಗಿ ಇದೀಗ ಉಗ್ರರು ಬ್ಯಾಂಕ್ ಗಳ ಮೇಲೆ ದಾಳಿ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಅಲ್ಲದೆ, ಪಾಕಿಸ್ತಾನದ ಉಗ್ರ ಅಬು ಅಲಿ ದರೋಡೆ ಗುಂಪಿನ ನಾಯಕತ್ವವನ್ನು ವಹಿಸಿದ್ದಾನೆಂದು ತಿಳಿಸಿದ್ದಾರೆ.

ಪುಲ್ವಾಮ ಎಸ್ ಪಿ ರಯೀಸ್ ಮೊಹಮ್ಮದ್ ಭಟ್ ಮಾತನಾಡಿ, ಬ್ಯಾಂಕ್ ಗಳ ದರೋಡೆಯಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಉಗ್ರರು, ಇಬ್ಬರು ಸ್ಥಳೀಯರು ಹಾಗೂ ಇಬ್ಬರು ಪಾಕಿಸ್ತಾನೀಯರು ಭಾಗಿಯಾಗುತ್ತಿದ್ದಾರೆ. ಬ್ಯಾಂಕ್ ಗಳ ಮೇಲೆ ದಾಳಿಯಾದ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ಪರಿಶೀಲನೆ ವೇಳೆ ಈ ಸತ್ಯಾಂಶ ತಿಳಿದುಬಂದಿದೆ ಎಂದು ಹೇಳಿದ್ದಾರೆ.  

ಇನ್ನು ಪೊಲೀಸರ ಈ ಆರೋಪವನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ತಿರಸ್ಕರಿಸಿದೆ. ಇಸ್ಲಾಂ ವಿರೋಧಿಗಳು ಹಾಗೂ ಸ್ವಾತಂತ್ರ್ಯ ವಿರೋಧಿಗಳು ನಮ್ಮ ಮೇಲೆ ದರೋಡೆ ಆರೋಪವನ್ನು ಮಾಡುತ್ತಿದ್ದಾರೆ. ಉಗ್ರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸ್ವಾತಂತ್ರ್ಯ ಹಾಗೂ ಇಸ್ಲಾಂಗಾಗಿ ಹೋರಾಟ ಮಾಡುತ್ತಿದ್ದಾರೆ. ಬ್ಯಾಂಕ್ ದರೋಡೆಯಂತಹ ಕೀಳುಮಟ್ಟದ ಕೃತ್ಯಗಳಿಗೆ ಅವರು ಎಂದಿಗೂ ಇಳಿಯುವುದಿಲ್ಲ ಎಂದು ಹಿಜ್ಬುಲ್ ಉಗ್ರ ಸಂಘಟನೆ ಉಪ ಮುಖ್ಯಸ್ಥ ಸೈಫುಲ್ಲಾಹ್ ಖಲೀದ್ ಹೇಳಿದ್ದಾನೆ.

SCROLL FOR NEXT