ಹೈದರಾಬಾದ್: ಆನೆಗಳ ಗುಂಪಿನ ದಾಳಿಯಿಂದಾಗಿ ನಾಶವಾಗಬೇಕಿದ್ದ ಒಂದಿಡೀ ಗ್ರಾಮವನ್ನು ಹೈದರಾಬಾದ್ ಮೂಲದ ಶಿಕಾರಿಯೊಬ್ಬ ರಕ್ಷಿಸಿದ್ದು, ಇದೀಗ ಅರಣ್ಯ ಇಲಾಖೆಯ ಶ್ಲಾಘನೆಗೆ ಪಾತ್ರವಾಗಿದ್ದಾರೆ.
ಬಿಹಾರದ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನವಾಬ್ ಶಫಾತ್ ಅಲಿ ಖಾನ್ ಎಂಬ ಶಿಖಾರಿಯ ಸಮಯ ಪ್ರಜ್ಞೆಯಿಂದಾಗಿ ಬಿಹಾರದ ಗ್ರಾಮವೊಂದು ಆನೆ ದಾಳಿಯಿಂದ ರಕ್ಷಿಸಲ್ಪಟ್ಟಿದೆ. ಬಿಹಾರದ ಔರಂಗಾಬಾದ್ ಜಿಲ್ಲೆಯ ಬುದ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈಗ್ಗೆ ಕಳೆದ ಜನವರಿ 20ರಂದು ತನ್ನ ತಂಡದೊಂದಿಗೆ ಕಾರ್ಯನಿರತನಾಗಿದ್ದ ನವಾಬ್ ಅಲಿ ಖಾನ್ ಜೀಪ್ ನಲ್ಲಿ ತೆರಳುತ್ತಿದ್ದಾಗ ಆನೆಗಳು ಘೀಳಿಡುತ್ತಿದ್ದು ಕೇಳಿಬಂದಿದೆ. ತಕ್ಷಣವೇ ಜೀಪ್ ನಿಲ್ಲಿಸಿದ ನವಾಬ್ ಅಲಿಖಾನ್ ಗೆ 14 ಆನೆಗಳು ಗ್ರಾಮದ ಮೇಲೆ ದಾಳಿ ಮಾಡುತ್ತಿದ್ದುದು ಕಂಡುಬಂದಿದೆ. ಗ್ರಾಮಸ್ಥರು ಹೇಳುವಂತೆ ಆನೆಗಳು ಅದಾಗಲೇ ಮೂವರ ಗ್ರಾಮಸ್ಥರನ್ನು ಬಲಿ ಪಡೆದಿದ್ದು, ಗ್ರಾಮದಲ್ಲಿ ತೋಟ-ಗದ್ದೆಗಳ ಮೇಲೆ ದಾಳಿ ಮಾಡಿ ಬೆಳೆ ನಾಶಮಾಡಿವೆ. ಇನ್ನು ಗ್ರಾಮದಲ್ಲಿನ ಮೂರು ಮಣ್ಣಿನ ಮನೆಗಳನ್ನೂ ಕೂಡ ಆನೆಗಳು ನಾಶ ಮಾಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತನಾದ ನವಾಬ್ ಅಲಿಖಾನ್ ಇಲಾಖೆಗೆ ಸುದ್ದಿ ಮುಟ್ಟಿಸಿ, ತನ್ನ ತಂಡದೊಂದಿಗೆ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಗೆ ಇಳಿಯುತ್ತಾರೆ. ಆನೆಗಳು ಹೆದ್ದಾರಿ ಮೂಲಕವೇ ಕಾಡಿಗೆ ಪ್ರವೇಶ ಮಾಡಬೇಕಾದ್ದರಿಂದ ದೆಹಲಿ-ಕೋಲ್ಕತಾ ಹೆದ್ದಾರಿಯನ್ನು ಬಂದ್ ಮಾಡಲಾಗಿರುತ್ತದೆ. ಆನೆಗಳನ್ನು ಕಾಡಿಗಟ್ಟಲು ಕಾರ್ಯಾಚರಣೆ ಆರಂಭಿಸಿದ ನವಾಬ್ ಅಲಿ ಖಾನ್ ಮತ್ತು ತಂಡ ಬೆಳಗಿನ ಜಾವ 2 ಗಂಟೆಯಿಂದ 3 ಗಂಟೆಯವರೆಗೂ ಆನೆಗಳನ್ನು ಹಿಂಬಾಲಿಸುತ್ತಾರೆ. ಅಲ್ಲದೆ ಪಟಾಕಿಗಳನ್ನು ಸಿಡಿಸುವ ಮೂಲಕ ಆನೆಗಳನ್ನು ಬೆದರಿಸುವ ಪ್ರಯತ್ನ ಮಾಡುತ್ತಾರೆ. ಈ ನಡುವೆ ಸುಮಾರು 7 ವರ್ಷ ಪ್ರಾಯದ ಗಂಡು ಆನೆ ಮಾತ್ರ ಹಿಂದೆ ಉಳಿಯುತ್ತದೆ. ಗ್ರಾಮದ ಮೇಲೆ ದಾಳಿ ಮಾಡುವ ವೇಳೆ ಇದೇ ನವಾಬ್ ಅಲಿಖಾನ್ ಆ ಆನೆಗೆ ಅರವಳಿಕೆ ಮದ್ದನ್ನು ಶೂಟ್ ಮಾಡಿರುತ್ತಾರೆ. ಹೀಗಾಗಿ ಆನೆ ನಿತ್ರಾಣಗೊಂಡು ಹಿಂದೆ ಉಳಿದುಬಿಡುತ್ತದೆ. ಈ ಆನೆಯನ್ನು ನವಾಬ್ ಅಲಿಖಾನ್ ಗಯಾದಲ್ಲಿರುವ ಆನೆ ಸಂರಕ್ಷಿತಾರಣ್ಯಕ್ಕೆ ಸಾಗಿಸುತ್ತಾರೆ.
ಅತ್ತ ಆನೆಗಳನ್ನು ಕಾಡಿಗಟ್ಟುವ ಪ್ರಕ್ರಿಯೆಗಾಗಿ ಅರಣ್ಯ ಇಲಾಖೆ 12 ನುರಿತ ತಜ್ಞರನ್ನು ನೇಮಿಸುತ್ತಾರೆ. ಆದರೆ ಸತತ ಪ್ರಯತ್ನಗಳ ನಡುವೆಯೂ ಆನೆಗಳನ್ನು ಕಾಡಿಗಟ್ಟುವಲ್ಲಿ ಆ ತಂಡ ವಿಫಲವಾಗುತ್ತದೆ. ಅಂತಿಮವಾಗಿ ಮತ್ತೆ ಅರಣ್ಯ ಇಲಾಖೆ ನವಾಬ್ ಅಲಿ ಖಾನ್ ಸೇರಿದಂತೆ ಮೂವರು ಅಧಿಕಾರಿಗಳಿಗೆ ಬುಲಾವ್ ನೀಡುತ್ತದೆ. ಈ ಅಧಿಕಾರಿಗಳ ತಂಡದಲ್ಲಿ ವನ್ಯಜೀವಿ ಇಲಾಖೆ ಮುಖ್ಯಸ್ಥ ಎಸ್ ಎಸ್ ಚೌದರಿ, ಪ್ರಾದೇಶಿಕ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಎಸ್ ಕೆ ಸಿಂಗ್ ಸೇರಿದಂತೆ ನವಾಬ್ ಅಲಿಖಾನ್ ಕೂಡ ಇರುತ್ತಾರೆ. ಸತತ ಸುಮಾರು 6 ಗಂಟೆಗೂ ಅಧಿಕ ಸಮಯ ಕಾರ್ಯಾಚರಣೆ ನಡೆಸಿದ ಈ ತಂಡ ಅಂತಿಮವಾಗಿ ಆನೆಗಳನ್ನು ಕಾಡಿಗಟ್ಟುತ್ತವೆ.
ಸುಮಾರು 200 ಮಂದಿ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆಗೆಳಿದ ಈ ತಂಡ ಸಮೀಪದ ಗ್ರಾಮಗಳನ್ನು ಆನೆಗಳು ಪ್ರವೇಶ ಮಾಡಬಹುದಾಗಿದ್ದ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ ಹಿಂದಿನಿಂದ ಪಟಾಕಿ, ಸಿಡಿಮದ್ದನ್ನು ಸಿಡಿಸುವ ಮೂಲಕ ಆನೆಗಳನ್ನು ಹಿಂಬಾಲಿಸುತ್ತಾರೆ. ಅಂತಿಮವಾಗಿ ಭಾನುವಾರ ಎಲ್ಲ ಆನೆಗಳನ್ನು ಕಾಡಿಗೆ ಅಟ್ಟುವಲ್ಲಿ ಸಫಲರಾಗುತ್ತಾರೆ.