ನವದೆಹಲಿ: ರೈಲ್ವೇ ಪ್ರಯಾಣ ಮಾಡುತ್ತಿದ್ದ ವೇಳೆ ನಿಗೂಢವಾಗಿ ನಾಪತ್ತೆಯಾಗಿದ್ದ ಭಾರತೀಯ ಸೇನೆಯ ಕ್ಯಾಪ್ಟನ್ ಶನಿವಾರ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕ್ಯಾಪ್ಟನ್ ಶಿಖರ್ ದೀಪ್ (25) ಫೆ. 6ರಂದು ಕತಿಹಾರ್ ನಿಂದ ನವದೆಹಲಿ ಬರಲು ಮಹಾನಂದನ್ ಎಕ್ಸ್‌ಪ್ರೆಸ್ ಹತ್ತಿದ್ದರು. ರೈಲು ಪಾಟ್ನಾ ನಿಲ್ದಾಣವನ್ನು ಹಾದು ಹೋಗುತ್ತಿದ್ದಂತೆ ದೀಪ್ ಅವರನ್ನು ಯಾರೋ ಅಪಹರಿಸಿ ಗೌಪ್ಯ ಸ್ಥಳವೊಂದಲ್ಲಿರಿಸಿದ್ದಾರೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ದೀಪ್ ರೈಲು ಹತ್ತಿ ಫೈಜಾಬಾದ್ ಪೊಲೀಸ್ ಠಾಣೆಗೆ ಬಂದಿದ್ದಾರೆ.
ದೀಪ್ ಕತಿಹಾರ್ ನಿಂದ ಫೆ. 6 ರಂದು ರೈಲು ಹತ್ತಿದ್ದಾರೆ. ನವದೆಹಲಿ ನಿಲ್ದಾಣಕ್ಕೆ ತಲುಪಿದಾಗ ಅವರಿದ್ದ ಕೋಚ್‌ನಲ್ಲಿ ಅವರ ಲಗೇಜು ಮಾತ್ರ ಪತ್ತೆಯಾಗಿತ್ತು. ಶನಿವಾರ ಬೆಳಗ್ಗೆ ಫೈಜಾಬಾದ್ ಪೊಲೀಸ್ ಠಾಣೆಯಿಂದ ನನ್ನ ಮಗ ಪತ್ತೆಯಾಗಿದ್ದಾನೆ ಎಂದು ಫೋನ್ ಬಂತು. ಆತ ಸುರಕ್ಷಿತವಾಗಿದ್ದಾನೆ ಎಂದು ಕ್ಯಾಪ್ಟನ್ ಶಿಖರ್ ದೀಪ್ ನ ಅಪ್ಪ ತಿಳಿಸಿದ್ದಾರೆ.