ನವದೆಹಲಿ: ವಿವಾದಾತ್ಮಕ ಭಾಷಣ ಮತ್ತು ಲೇಖನಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮುಸ್ಲಿಂ ಪ್ರವಚನಕಾರ ಜಾಕೀರ್ ನಾಯಕ್ ಅವರು, ತಾವು ಯಾವುದೇ ಹಿಂಸಾಚಾರ ಅಥವಾ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ನನ್ನ ಹೇಳಿಕೆಗಳನ್ನು ಯಾವುದೇ ರೀತಿಯ ಹಿಂಸೆಗೆ ಬಳಸುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ತನ್ನ ವಿರುದ್ಧ ತನಿಖೆಯ ಎಚ್ಚರಿಕೆ ನೀಡಿದ ಬೆನ್ನಲ್ಲೇ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಜಾಕೀರ್ ನಾಯಕ್, ನನ್ನನ್ನು ಇದುವರೆಗೆ ಯಾವ ಅಧಿಕಾರಿಯೂ ಸಂರ್ಪಸಿಲ್ಲ. ಭಾರತದ ಯಾವುದೇ ತನಿಖಾ ಸಂಸ್ಥೆಯ, ಯಾರೇ ಅಧಿಕಾರಿಗೂ ನನ್ನಿಂದ ಏನೇ ಮಾಹಿತಿ ಬೇಕಾಗಿದ್ದರೂ ಒದಗಿಸಲು ನಾನು ಸಿದ್ಧ ಎಂದು ಹೇಳಿದ್ದಾರೆ.
ಕಾಲಾವಕಾಶ ಲಭಿಸಿದರೆ, ಕೆಲವೇ ದಿನಗಳಲ್ಲಿ ನನ್ನ ವಿರುದ್ಧ ಮಾಡಲಾಗಿರುವ ಪ್ರಮುಖ ಆರೋಪಗಳಿಗೆ ನಾನು ವಿಡಿಯೋ ಮೂಲಕವೇ ಉತ್ತರಗಳನ್ನು ನೀಡುತ್ತೇನೆ ಮತ್ತು ಅದನ್ನು ಮಾಧ್ಯಮಗಳಿಗೂ ನೀಡುತ್ತೇನೆ ಎಂದು ಹೇಳಿದ್ದಾರೆ.
2016ರ ಜುಲೈ 1ರಂದು ಬಾಂಗ್ಲಾದೇಶದ ಡಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಮಾಧ್ಯಮಗಳು ನನ್ನ ಬಗ್ಗೆ ನಡೆಸುತ್ತಿರುವ ವಿಚಾರಣೆ ನನಗೆ ಆಘಾತ ಉಂಟು ಮಾಡಿದೆ ಎಂದು ಅವರು ಜಾಕೀರ್ ನಾಯಕ್ ತಿಳಿಸಿದ್ದಾರೆ.