ದೇಶ

ಭಾರತೀಯ ವಾಯುಪಡೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಿಂಗ್ ಕಮಾಂಡರ್ ಪೂಜಾ

Lingaraj Badiger
ನವದೆಹಲಿ: ಪರ್ಮನೆಂಟ್ ಕಮಿಷನ್​ಗೆ ಸೇರ್ಪಡೆ ಮಾಡಿಕೊಳ್ಳಲು ನಿರಾಕರಿಸಿದ ಭಾರತೀಯ ವಾಯುಪಡೆ(ಐಎಎಫ್) ವಿರುದ್ಧ ವಿಂಗ್ ಕಮಾಂಡರ್ ಪೂಜಾ ಠಾಕೂರ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಪೂಜಾ ಠಾಕೂರ್ ಅವರು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು 2015ರ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡದ ವೇಳೆ ರಾಷ್ಟ್ರಪತಿ ಭವನದಲ್ಲಿ ಅವರಿಗೆ ಗಾರ್ಡ್ ಆಫ್ ಹಾನರ್ ಒದಗಿಸಿದ್ದರು. ಈ ಗೌರವಕ್ಕೆ ಪಾತ್ರರಾದ ಮೊದಲ ಮಹಿಳಾ ಅಧಿಕಾರಿ ಎಂಬ ಗೌರವಕ್ಕೂ ಪೂಜಾ ಪಾತ್ರರಾಗಿದ್ದರು.
ಈಗ ಪರ್ಮನೆಂಟ್ ಕಮಿಷನ್​ಗೆ ಸೇರ್ಪಡೆ ಮಾಡಿಕೊಳ್ಳುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ, ಸಶಸ್ತ್ರ ಸೇನಾಪಡೆಗಳ ನ್ಯಾಯಪೀಠ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಕಾರಣವಿಲ್ಲದೆ ನನ್ನ ಬೇಡಿಕೆಯನ್ನು ನಿರಾಕರಿಸಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ. ಪೂಜಾ ಠಾಕೂರ್ ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಪೀಠ, ಭಾರತೀಯ ವಾಯುಪಡೆಗೆ ಪ್ರತಿಕ್ರಿಯೆ ನೀಡಲು ನಾಲ್ಕು ವಾರಗಳ ಗಡುವು ನೀಡಿದೆ.
ಪೂಜಾ ಠಾಕೂರ್ 2000ನೇ ಇಸವಿಯಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದರು. ಕಳೆದ ತಿಂಗಳಷ್ಟೇ ಮೂವರು ಮಹಿಳಾ ಪೈಲಟ್ ಗಳು ಭಾರತೀಯ ವಾಯುಪಡೆ ಸೇರ್ಪಡೆಯಾಗಿದ್ದರು. 
ಕೇಂದ್ರ ಸರ್ಕಾರ ಮಹಿಳೆಯರಿಗೆ ಪರ್ಮನೆಂಟ್ ಕಮಿಷನ್​ಗೆ ಸೇರ್ಪಡೆ ಮಾಡಿಕೊಳ್ಳುವ ಪ್ರಸ್ತಾವನೆಗೆ ಅಂಗೀಕಾರ ನೀಡಿಲ್ಲ. ಪ್ರಸ್ತುತ ಇರುವ ನಿಯಮಾವಳಿಗಳ ಪ್ರಕಾರ ಮಹಿಳಾ ಅಧಿಕಾರಿಗಳು 13 ರಿಂದ 14 ವರ್ಷ ಸೇವೆ ಸಲ್ಲಿಸಬಹುದಾಗಿದೆ ಎಂದು ನಿವೃತ್ತ ಏರ್ ಮಾರ್ಷಲ್ ಪಿ.ಎಸ್. ಅಹ್ಲುವಾಲಿಯಾ ತಿಳಿಸಿದ್ದಾರೆ.
SCROLL FOR NEXT