ಪಾಟ್ನಾ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆ ವಿವಾದಾತ್ಮಕ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಹಾಗೂ ಎಂಐಎಂ ಪಕ್ಷದ ಮುಖ್ಯಸ್ಥ ಅಸಾವುದ್ದೀನ್ ಓವೈಸಿಗೆ ಬೆಂಬಲ ಘೋಷಿಸಿ ಪಾಟ್ನಾದಲ್ಲಿ ಬೃಹತ್ ರ್ಯಾಲಿ ನಡೆಸಿದೆ
ರ್ಯಾಲಿ ವೇಳೆ ಉಗ್ರರಿಗೆ ಸ್ಫೂರ್ತಿಯಾಗಿರುವ ಜಾಕಿರ್ ನಾಯಕ್ ಗೆ ಬೆಂಬಲ ಘೋಷಿಸುವುದೂ ಅಲ್ಲದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಪಾಕಿಸ್ತಾನದ ಪರ ಘೋಷಣೆ ಕೇಳಿಬಂದಿದ್ದು ಮತ್ತಷ್ಟು ಅಚ್ಚರಿ ಮೂಡಿಸಿದ್ದು ಮೊಹಮ್ಮದ್ ರಿಯಾಜ್ ಮೌರಿ ಎಂಬ ವ್ಯಕ್ತಿ ರ್ಯಾಲಿಯ ನೇತೃತ್ವವನ್ನು ವಹಿಸಿದ್ದ ಎಂದು ತಿಳಿದುಬಂದಿದೆ.
ರ್ಯಾಲಿಯಲ್ಲಿ ಭಾಗವಹಿಸಿದ್ದವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಮುಸ್ಲಿಂ ವೀರೋಧಿ ಸರ್ಕಾರ ಎಂದು ಆರೋಪಿಸಿದ್ದಾರೆ. " ಮುಸ್ಲಿಂ ನಾಯಕರನ್ನು ಭಾರತದಲ್ಲಿ ತುಳಿಯಲಾಗುತ್ತಿದೆ ಎಂದು ಆರೋಪಿಸಿರುವ ಪಿಎಫ್ಐ ನಾಯಕ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾನೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ. ರ್ಯಾಲಿಯಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿರುವ ಘಟನೆಯನ್ನು ಸ್ಪಷ್ಟಪಡಿಸಿರುವ ಡಿಜಿಪಿ ಪಿಕೆ ಠಾಕೂರ್, ಘಟನೆಯ ವಿಡಿಯೋ ತುಣುಕುಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.