ದೇಶ

ಸುಬ್ರಹ್ಮಣಿಯನ್ ಸ್ವಾಮಿ ಪಾಲ್ಗೊಳ್ಳಬೇಕಿದ್ದ ಎರಡು ಬಿಜೆಪಿ ಕಾರ್ಯಕ್ರಮ ಏಕಾಏಕಿ ರದ್ದು?

Srinivas Rao BV

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಸರ್ಕಾರಿ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿರುವುದಕ್ಕೆ ಸುಬ್ರಹ್ಮಣಿಯನ್ ಸ್ವಾಮಿ ವಿರುದ್ಧ ಬಿಜೆಪಿ ವರಿಷ್ಠರು ಅಸಮಾಧಾನಗೊಂಡಿದ್ದಾರೆ ಎಂಬುದಕ್ಕೆ ಮತ್ತೊಂದು ಪುರಾವೆ ಸಿಕ್ಕಂತೆ ತೋರುತ್ತಿದ್ದು, ಸುಬ್ರಹ್ಮಣಿಯನ್ ಸ್ವಾಮಿ ಭಾಗವಹಿಸಿ ಮಾತನಾಡಬೇಕಿದ್ದ ಪಕ್ಷದ ಎರಡು ಕಾರ್ಯಕ್ರಮಗಳನ್ನೇ ರದ್ದುಗೊಳಿಸಲಾಗಿದೆ.

ಭಾನುವಾರ ಮುಂಬೈ ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಹಾಗೂ ಈ ವಾರದಲ್ಲಿ ಚೆನ್ನೈ ನಲ್ಲಿ ಆರ್ ಎಸ್ ಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಭಾಗವಹಿಸಿ ಮಾತನಾಡಬೇಕಿತ್ತು. ಆದರೆ ಎರಡೂ ಕಾರ್ಯಕ್ರಮಗಳು ದಿಢೀರ್ ರದ್ದುಗೊಂಡಿದೆ. ಇದನ್ನು ಸಚಿವ ಅರುಣ್ ಜೇಟ್ಲಿ, ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ಸೇರಿದಂತೆ ಸರ್ಕಾರದಲ್ಲಿರುವ ಹಲವರ ವಿರುದ್ಧ ಸುಬ್ರಹ್ಮಣಿಯನ್ ಸ್ವಾಮಿ ನಡೆಸಿದ್ದ ವಾಗ್ದಾಳಿ ಹಾಗೂ ಅದಕ್ಕೆ ಬಿಜೆಪಿ ವರಿಷ್ಠರು ಅಸಮಾಧಾನಗೊಂಡಿರುವ ಬೆಳವಣಿಗೆಯೊಂದಿಗೆ ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಯ ಹಿರಿಯ ನಾಯಕರು ನೇರವಾಗಿ ಸುಬ್ರಹ್ಮಣಿಯನ್ ಸ್ವಾಮಿ ಅವರನ್ನು ವಿರೋಧಿಸಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೆ ಸುಬ್ರಹ್ಮಣಿಯನ್ ಸ್ವಾಮಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ಚಿಂತನೆ ನಡೆಸಿತ್ತಾದರೂ, ಆತುರದ ನಿರ್ಧಾರ ಬೇಡ ಎಂಬ ತೀರ್ಮಾನಕ್ಕೆ ಬಂದಿತ್ತು ಎಂದು ಹೇಳಲಾಗುತ್ತಿದೆ. ಆದರೆ ಈಗ ಸ್ವಾಮಿ ಭಾಗವಹಿಸಿ ಮಾತನಾಡಬೇಕಿದ್ದ ಪಕ್ಷದ ವತಿಯಿಂದ ಆಯೋಜಿಸಲಾಗಿದೆ ಎನ್ನಲಾದ ಎರಡೂ ಕಾರ್ಯಕ್ರಮಗಳು ಏಕಾಏಕಿ ರದ್ದುಗೊಂಡಿರುವುದು ಕುತೂಹಲ ಮೂಡಿಸಿದೆ. 

SCROLL FOR NEXT