ನವದೆಹಲಿ: ಕೃಷಿ ಗಳಿಕೆಯ ಹೆಸರಿನಲ್ಲಿ ಆದಾಯ ತೆರಿಗೆ ವಂಚನೆ ಮಾಡುತ್ತಿರುವ ಕೆಲವು ಪ್ರಮುಖ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸಂಸತ್ ಗೆ ತಿಳಿಸಿದ್ದಾರೆ.
ತೆರಿಗೆ ವ್ಯಾಪ್ತಿಗೆ ಬರುವ ಆದಾಯವನ್ನು ಕೃಷಿ ಆದಾಯ ಎನ್ನುತ್ತಿರುವ ಪ್ರಮುಖ ವ್ಯಕ್ತಿಗಳ ಹೆಸರು ಬಹಿರಂಗವಾದರೆ ಅದನ್ನು ರಾಜಕೀಯ ದ್ವೇಷ ಎಂದು ವಿಪಕ್ಷಗಳು ಆರೋಪ ಮಾಡುವಂತಿಲ್ಲ ಎಂದು ಜೇಟ್ಲಿ ವಿಪಕ್ಷಗಳಿಗೆ ಹೇಳಿದ್ದಾರೆ. ದೇಶದಲ್ಲಿರುವ ಕಪ್ಪು ಹಣ ಕೃಷಿ ಆದಾಯದ ರೂಪದಲ್ಲಿ ಹರಿದಾಡುತ್ತಿದ್ದು ತೆರಿಗೆ ವಂಚನೆ ಮಾಡುವುದಕ್ಕೂ ಸಹ ಸಹಕಾರಿಯಾಗಿರುವುದರ ಬಗ್ಗೆ ಜೆಡಿ-ಯು, ಎಸ್ ಪಿ, ಬಿಎಸ್ ಪಿ ನಾಯಕರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅರುಣ್ ಜೇಟ್ಲಿ, ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಆದಾಯ ತೆರಿಗೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ತನಿಖೆ ಮುಕ್ತಾಯಗೊಂಡ ಬಳಿಕ, ವಿಪಕ್ಷಗಳು ಅಪರಾಧಿಗಳನ್ನು ರಾಜಕೀಯ ಬಲಿಪಶುಗಳನ್ನಾಗಿ ಮಾಡಲಾಗಿದೆ ಎಂದು ಆರೋಪಿಸುವಂತಿಲ್ಲ ಎಂದಿದ್ದಾರೆ ಜೇಟ್ಲಿ.