ನವದೆಹಲಿ: ಬಹುಕೋಟಿ ವಿವಿಐಪಿ ಪ್ರಕರಣದಲ್ಲಿ ಬಹಳವಾಗಿ ಕೇಳಿ ಬರುತ್ತಿರುವ ಬ್ರಿಟನ್ ಮೂಲದ ದಲ್ಲಾಳಿ ಕ್ರಿಶ್ಟಿಯನ್ ಮೈಕೆಲ್ ನನ್ನು ಬಂಧಿಸುವುದಿಲ್ಲ ಎಂದು ಆಶ್ವಾಸನೆ ನೀಡಿದರೆ ಮಾತ್ರ ಅವರು ಭಾರತದ ನ್ಯಾಯಾಲಯಕ್ಕೆ ಶರಣಾಗುತ್ತಾರೆ ಎಂದು ಮೈಕೆಲ್ ಪರ ವಕೀಲರು ತಿಳಿಸಿದ್ದಾರೆ.
ಅಗಸ್ತಾ ವೆಸ್ಟ್‌ಲ್ಯಾಂಡ್ ಹಗರಣ ಸಂಬಂಧಿಸಿದ ಇಟಲಿ ನ್ಯಾಯಾಲಯದ ಆದೇಶದಲ್ಲಿ ಸೋನಿಯಾ ಮತ್ತು ಮನಮೋಹನ್ ಸಿಂಗ್ ಹೆಸರು ಕೇಳಿಬಂದ ಬಳಿಕ ಒಪ್ಪಂದದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ತಪ್ಪೊಪ್ಪಿಕೊಳ್ಳಲು ಸಿದ್ಧರಿದ್ದು, ತಮ್ಮನ್ನು ಬಂಧಿಸದಿದ್ದರೆ ಮಾತ್ರ ತಾವು ನ್ಯಾಯಾಲಯಕ್ಕೆ ಶರಣಾಗುವುದಾಗಿ ಹೇಳಿದ್ದಾರೆ ಎಂದು ಮೈಕೆಲ್ ಪರ ವಕೀಲೆ ರೋಸ್‌ಮೆರಿ ಪಟ್ರಿಜಿ ತಿಳಿಸಿದ್ದಾರೆ.
"ದುಬೈನಲ್ಲಿರುವ ಮೈಕೆಲ್ ಪ್ರಕರಣ ಸಂಬಂಧ ತಮಗೆ ತಿಳಿದಿರುವ ಎಲ್ಲ ವಿಚಾರಗಳನ್ನು ನ್ಯಾಯಾಲಯದ ಮುಂದೆ ಹೇಳಲು ಸಿದ್ಧರಿದ್ದಾರೆ. ಆದರೆ, ಭಾರತದಲ್ಲಿ ಅವರಿಗೆ ಬಂಧನ ಭೀತಿಯಿದ್ದು, ಬಂಧಿಸುವುದಿಲ್ಲ ಎಂದು ಭಾರತ ಆಶ್ವಾಸನೆ ನೀಡಿದರೆ ಮಾತ್ರ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ತಮಗೆ ತಿಳಿದಿರುವ ಎಲ್ಲ ವಿಚಾರಗಳನ್ನು ಹೇಳುತ್ತಾರೆ. ಎಂದು ರೋಸ್ ಮೆರಿ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ರೋಸ್‌ಮೆರಿ, ಮೈಕೆಲ್ ಭಾರತಕ್ಕೆ ತೆರಳಿ ಅವರಿಗೆ ತಿಳಿದಿರುವ ಸತ್ಯವನ್ನು ಬಹಿರಂಗಪಡಿಸಲು ಇಚ್ಛಿಸಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ರೀತಿಯ ಬಂಧನ ವಾರಂಟ್ ಜಾರಿಗೊಳಿಸಬಾರದು ಎಂದು ಹೇಳಿದ್ದಾರೆ.
ಉಲ್ಟಾ ಹೊಡೆದ ಮೈಕೆಲ್?
ಅತ್ತ ಮೈಕೆಲ್ ಪರ ವಕೀಲೆ ರೋಸ್ ಮೆರಿ, ದಲ್ಲಾಳಿ ಮೈಕೆಲ್ ಶರಣಾಗಲು ಸಿದ್ಧರಿದ್ದಾರೆ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ದಲ್ಲಾಳಿ ಮೈಕೆಲ್ ಮಾತ್ರ ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡುತ್ತಿದ್ದಾನೆ. "ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ನಾನು ಭಾರತೀಯ ರಾಯಭಾರ ಕಚೇರಿ ಮೂಲಕ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಸಾಕ್ಷಿಗಳನ್ನು ನೀಡಲು ಸಿದ್ಧನಿದ್ದೇನೆ" ಎಂದು ಹೇಳಿದ್ದಾರೆ.