ನವದೆಹಲಿ: ಯುಪಿಎ ಸರ್ಕಾರ ವಿವಿಐಪಿ ಹೆಲಿಕಾಫ್ಟರ್ ಪೂರೈಕೆ ಒಪ್ಪಂದದಲ್ಲಿ ಒಂದೇ ಮಾರಾಟ ಸಂಸ್ಥೆ ಇರುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆರೋಪ ಮಾಡಿದ್ದಾರೆ.
ಲೋಕಸಭೆಯಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಬಗ್ಗೆ ಮಾತನಾಡಿದ ಮನೋಹರ್ ಪರಿಕ್ಕರ್, ಹಗರಣದ ಸಂಬಂಧ ಸಿಬಿಐ 2013 ರ ಮೇ ತಿಂಗಳಲ್ಲೇ ಎಫ್ಐಆರ್ ದಾಖಲಿಸಿತ್ತು. ಆದರೆ ಸಿಬಿಐ ನ ಎಫ್ಐ ಆರ್ ಪ್ರತಿಯನ್ನು 2013 ರ ಡಿಸೆಂಬರ್ ವರೆಗೂ ಜಾರಿ ನಿರ್ದೇಶನಾಲಯಕ್ಕೆ ಕಳಿಸಿರಲಿಲ್ಲ ಎಂದು ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಹಗರಣ ನಡೆದರೂ ಯುಪಿಎ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ, ನಂತರ 2014 ರಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಅರುಣ್ ಜೇಟ್ಲಿ ರಕ್ಷಣಾ ಸಚಿವರಾದಾಗ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣವನ್ನು ಜಾರಿ ನಿರ್ದೇಶನಾಲಯ ಕೈಗೆತ್ತಿಕೊಂಡಿತು ಎಂದು ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಮುಂದುವರೆದು ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮನೋಹರ್ ಪರಿಕ್ಕರ್, ಅವ್ಯವವಹಾರ ನಡೆದಿದೆ ಎಂಬುದು ತಿಳಿದ ನಂತರವೂ ಯುಪಿಎ ಸರ್ಕಾರ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಗೆ ಮೂರು ಹೆಲಿಕಾಫ್ಟರ್ ಗಳನ್ನು ಪೂರೈಕೆ ಮಾಡಲು ಅವಕಾಶ ಮಾಡಿತ್ತು ಎಂದು ಆರೋಪಿಸಿದ್ದಾರೆ.