ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಹತ್ಯೆಯಾದ ಆಫ್ರಿಕಾ ಪ್ರಜೆಯ ಕುಟುಂಬಸ್ಥರನ್ನು ಕೇಂದ್ರ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಭೇಟಿ ಮಾಡಿದ್ದು, ಹತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೋಮವಾರ ಭರವಸೆ ನೀಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಹತ್ಯೆಯಾದ ಆಫ್ರಿಕಾ ಪ್ರಜೆ ಮಸೊಂದಾ ಕೆಟಾಡ ಅಲಿವರ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಹತ್ಯೆಯಾಗಿರುವ ಅಲಿವರ್ ಅವರ ಮೃತ ದೇಹವನ್ನು ಕಳುಹಿಸಿಕೊಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಇದಕ್ಕೆ ತಗುಲುವ ಎಲ್ಲಾ ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳಲಿದೆ. ಪ್ರಕರಣ ಕುರಿತ ತನಿಖೆಯನ್ನು ತ್ವರಿತಗೊಳಿಸುವಂತೆ ಸಚಿವೆ ಸುಷ್ಮಾ ಸ್ವರಾಜ್ ಅವರು ಸೂಚನೆ ನೀಡಿದ್ದಾರೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಹೇಳಿದ್ದಾರೆ.
ರಾಜಧಾನಿ ದೆಹಲಿಯ ವಸಂತ್ ಕುಂಜ್‌ನಲ್ಲಿ ಮೇ 20ರಂದು ಮಸೊಂದಾ ಕೆಟಾಡ ಅಲಿವರ್ ಅವರನ್ನು ಹತ್ಯೆ ಮಾಡಲಾಗಿತ್ತು.