ರು.2000 ಹೊಸ ನೋಟಿನ ವಿಶೇಷತೆಗಳು
ನವದೆಹಲಿ: ಕಪ್ಪು ಹಣಕ್ಕೆ ಕಡಿವಾಣ ಹಾಕಲು ಈಗಾಗಲೇ ಕೇಂದ್ರ ಸರ್ಕಾರ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದು, ಶೀಘ್ರದಲ್ಲಿಯೇ ರು.2000 ಹೊಸ ನೋಟು ದೇಶದಾದ್ಯಂತ ಚಲಾವಣೆಗೊಳ್ಳಲಿದೆ.
ರು.500 ಹಾಗೂ 1,000 ನೋಟುಗಳಿಗೆ ಕಡಿವಾಣ ಹಾಕುವ ಮೂಲಕ ಕಾಳಧನಿಕರಿಗೆ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡುಕ ಹುಟ್ಟಿಸಿದ್ದಾರೆ. ಕಪ್ಪು ಹಣಕ್ಕೆ ಹೇಗೆ ಕಡಿವಾಣ ಹಾಕಬೇಕೆಂಬುದಕ್ಕೆ ಉತ್ತಮ ಹೆಜ್ಜೆಯನ್ನು ಇಟ್ಟಿರುವ ಕೇಂದ್ರ ಇದೀಗ ಬಿಡುಗಡೆಯಾಗಲಿರುವ ಹೊಸ ನೋಟಿನಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಕೆ ಮಾಡಲು ನಿರ್ಧರಿಸಿದೆ.
ರು.2 ಸಾವಿರ ಮುಖಬೆಲೆಯ ನೋಟು ಭಾರತದಲ್ಲಿ ಚಲಾವಣೆಗೆ ಬರುತ್ತಿರುವುದು ಇದೇ ಮೊದಲಾಗಿದ್ದು, ಈ ನೋಟುಗಳು ಕಾಳಧನಕರಿಗೆ ಕಡಿವಾಣ ಹಾಕಲು ಸಹಾಯವಾಗಿರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನೋಟಿನಲ್ಲಿ ಸಾಕಷ್ಟು ಸುಧಾರಿತ ಭದ್ರತಾ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ನವೆಂಬರ್ 10ರಂದು ರು.500 ಹಾಗೂ 2,000 ನೋಟುಗಳು ಬಿಡುಗಡೆಯಾಗಲಿದೆ.
ನೋಟಿನ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್'ಬಿಐ) ಮಾಹಿತಿ ನೀಡಿದ್ದು, ನೋಟಿನ ವಿಶೇಷತೆ ಈ ಕೆಳಕಂಡಂತಿರುತ್ತದೆ...
- ರು.2 ಸಾವಿರ ನೋಟಿನ ಮಧ್ಯಭಾಗದಲ್ಲಿ ಮಹಾತ್ಮ ಗಾಂಧೀಜಿಯವರ ಚಿತ್ರ ಇರಲಿದ್ದು, ನೋಟಿನ ಬಣ್ಣ ಗುಲಾಬಿ ಬಣ್ಣವನ್ನು ಹೊಂದಿರಲಿದೆ.
- ಎಡಭಾಗದ ಬದಿಯಲ್ಲಿ ಆರ್'ಬಿಐ ಮತ್ತು ನೋಟಿನ ಸಂಖ್ಯೆಯನ್ನು ಮೈಕ್ರೋ ಲೆಟರ್ ನಲ್ಲಿ ಬರೆದಿರಲಾಗಿರುತ್ತದೆ.
- ಭಾರತ, ಆರ್ ಬಿಐ, ರು. 2000 ಮತ್ತು ಭದ್ರತೆ ಎಳೆಯನ್ನು ನೋಟಿನಲ್ಲಿ ಬರೆಯಲಾಗಿದ್ದು, ಬೆಳಕಿನಲ್ಲಿ ನೋಟಿನಲ್ಲಿ ಬರೆಯಲಾಗಿರುವ ಗೆರೆಯ ಬಣ್ಣ ಹಸಿರಿನಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.
- ನಡುಭಾಗದಲ್ಲಿ ಆರ್'ಬಿಐ ಗವರ್ನರ್ ಸಹಿ ಇರುತ್ತದೆ. ಬಲಭಾಗದ ಅಂಚಿನಲ್ಲಿ ರಾಷ್ಟ್ರಲಾಂಛನವಿರುತ್ತದೆ.
- ನೋಟಿನಲ್ಲಿ ಯಾವುದೇ ರೀತಿಯ ನ್ಯಾನೋ ಜಿಪಿಎಸ್ ಚಿಪ್'ನ್ನು ಅಳವಡಿಸಲಾಗಿಲ್ಲ.
- ನೋಟಿನ ಹಿಂಭಾಗದಲ್ಲಿ ಮಂಗಳ ಗ್ರಹಕ್ಕೆ ರವಾನಿಸಲಾದ ಭಾರತದ ಉಪಗ್ರಹದ ಚಿತ್ರವಿರುತ್ತದೆ. ಅಲ್ಲದೆ, ನಾಡ ಭಾಷೆ ಕನ್ನಡ ಸೇರಿದಂತೆ ಒಟ್ಟು 15 ಭಾಷೆಗಳಲ್ಲಿ ರುಪಾಯಿಯ ಬರಹವಿರುತ್ತದೆ.
- ಸ್ವಚ್ಛಭಾರತದ ಲಾಂಛನ, ಘೋಷಣಾವಾಕ್ಯ ಹಾಗೂ ನೋಟು ಮುದ್ರಣಗೊಂಡ ವರ್ಷದ ಉಲ್ಲೇಖವನ್ನು ಮಾಡಲಾಗಿರುತ್ತದೆ. ಇನ್ನು ನೋಟಿನ ಗಾತ್ರ ಎತ್ತರ 66 ಮಿಮಿ, ಅಗಲ 166 ಮಿಮಿ ಹೊಂದಿರುತ್ತದೆ ಎಂದು ಆರ್'ಬಿಐ ತಿಳಿಸಿದೆ.