ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಿಡಿಕಾರಿದ್ದು, ಪಾಕಿಸ್ತಾನ ವಿದೇಶಾಂಗ ನೀತಿ ಕುರಿತ ದೇಶಕ್ಕೆ ವಿವರಣೆ ನೀಡಿ ಎಂದು ಬುಧವಾರ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ನಗ್ರೋಟಾ ಉಗ್ರರ ದಾಳಿ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನ ಈಗಲೂ ಅಂತರಾಷ್ಟ್ರೀಯವಾಗಿ ಪ್ರತ್ಯೇಕಗೊಂಡಿಲ್ಲ. ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಗೆ ಪಾಕಿಸ್ತಾನ ಸ್ವಲ್ಪ ಕೂಡ ಗಲಿಬಿಲಿಗೊಂಡಿಲ್ಲ. ಈಗಲೂ ಉಗ್ರರು ಭಾರತದ ಮೇಲೆ ದಾಳಿ ಮಾಡುತ್ತಲೇ ಇದ್ದಾರೆಂದು ಹೇಳಿದ್ದಾರೆ.
ನಗ್ರೋಟಾ ಮೇಲೆ ಉಗ್ರರು ದಾಳಿ ಮಾಡಿದ್ದು, 7 ವೀರ ಯೋಧರು ಹುತಾತ್ಮರಾಗಿದ್ದಾರೆ. ಇದೀಗ ಸರ್ಕಾರ ಪಾಕಿಸ್ತಾನ ವಿದೇಶಾಂಗ ನೀತಿ ಕುರಿತು ದೇಶದ ಜನತೆ ವಿವರಣೆ ನೀಡಬೇಕಿದೆ. ಸರ್ಕಾರವನ್ನು ಪ್ರಶ್ನೆ ಮಾಡುವ ಜನರನ್ನು ಪಾಕಿಸ್ತಾನದ ಸ್ನೇಹಿತರೆಂದು ಕರೆಯುವುದು ಸುಲಭವಾಗಿರುತ್ತದೆ ಎಂದು ತಿಳಿಸಿದ್ದಾರೆ.