ಶ್ರೀನಗರ: ಅತ್ತ ಪ್ಯಾಂಪೋರ್ ಹೊರವಲಯದ ಸರ್ಕಾರಿ ಕಚೇರಿಯ ಮೇಲೆ ಉಗ್ರರ ದಾಳಿ ಮುಂದುವರೆದಿರುವಂತೆಯೇ ಇತ್ತ ಶೋಪಿಯಾನ್ ನಲ್ಲೂ ಉಗ್ರರು ಅಟ್ಟಹಾಸ ಮೆರೆದಿದ್ದು, ಸೇನಾ ವಾಹನಗಳ ಮೇಲೆ ಗ್ರೆನೇಡ್ ಎಸೆದಿದ್ದು, ದಾಳಿಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಬೆಳಗ್ಗೆ ಸಿಆರ್ ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡಲಾಗಿದ್ದು, ಘಟನೆಯಲ್ಲಿ ಓರ್ವ ಯೋಧ ಸೇರಿದಂತೆ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ. ಶೋಪಿಯಾನ್ ನ ಮಾರುಕಟ್ಟೆಯಲ್ಲಿ ನಿಯೋಜಿಸಲಾಗಿದ್ದ ಸಿಆರ್ ಪಿಎಫ್ ಯೋಧರ ಮೇಲೆ ಈ ದಾಳಿ ನಡೆದಿದ್ದು, ಅಗತ್ಯ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಯಲ್ಲಿ ಹೆಚ್ಚು ನಾಗರಿಕರು ಸೇರಿದ್ದರ ಪರಿಣಾಮ 8 ಮಂದಿ ನಾಗರಿಕರೂ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ದಾಳಿ ಬೆನ್ನಲ್ಲೇ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಪ್ರಸ್ತುತ ಘಟನಾ ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕರೆಸಿಕೊಂಡು ಉಗ್ರರ ವಿರುದ್ಧ ಪ್ರತಿದಾಳಿ ನಡೆಸಲಾಗುತ್ತಿದೆ.