ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಪ್ಪು ಹಣ ನಿಯಂತ್ರಣಕ್ಕೆ ಸಲಹೆ ನೀಡಿದ್ದು 500, 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ರಾಜಧಾನಿ ಅಮರಾವತಿಯ ತಮ್ಮ ನೂತನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಚಂದ್ರಬಾಬು ನಾಯ್ಡು, ಕಪ್ಪುಹಣ ತಡೆಗಟ್ಟಬೇಕೆಂದರೆ ಬ್ಯಾಂಕ್ ವ್ಯವಹಾರಗಳನ್ನು ಕಡ್ಡಾಯಗೊಳಿಸಬೇಕು, ಹಣದ ನೇರ ವಹಿವಾಟಿಗೆ ಕಡಿವಾಣ ಹಾಕಬೇಕಾದರೆ ಗರಿಷ್ಠ ಮುಖಬೆಲೆಯ 500, 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಬೇಕು, ಈ ಮೂಲಕ ಕಪ್ಪುಹಣ ಸಂಗ್ರಹಣೆಯನ್ನು ತಡೆಗಟ್ಟಬಹುದು ಎಂದು ಹೇಳಿದ್ದಾರೆ. 500, 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿರುವ ಚಂದ್ರಬಾಬು ನಾಯ್ಡು, ಚುನಾವಣೆಗಳ ವೇಳೆ ದುಡ್ಡು ಕೊಟ್ಟು ಮತಗಳನ್ನು ಖರೀದಿಸುವುದಕ್ಕೂ ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಕಡಿವಾಣ ಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.