ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿದ್ದು, ಬುಧವಾರ ರಾತ್ರಿ ನಡೆದ ಕಲ್ಲು ತೂರಾಟ ಹಿನ್ನೆಲೆಯಲ್ಲಿ ರಜೌರಿ ಟೌನ್ ನಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ರಜೌರಿ ಕ್ಷೇತ್ರದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಆರಂಭವಾಗಿದ್ದು, ಹಿಂಸಾಚಾರ ಹತ್ತಿಕ್ಕುವ ಸಲುವಾಗಿ ಕಳೆದ ರಾತ್ರಿಯಿಂದಲೇ ಕರ್ಫ್ಯೂ ಜಾರಿ ಮಾಡಲಾಗಿದೆ. ಪ್ರಸ್ತುತ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಆದರೆ, ಪರಿಸ್ಥಿತಿಯನ್ನು ಹತೋಟಿಯಲ್ಲಿರಿಸಲಾಗಿದೆ ಎಂದು ರಜೌರಿ-ಪೂಂಚ್ ಡಿಐಜಿ ಹೇಳಿದ್ದಾರೆ.
ಘಟನೆ ಕುರಿತಂತೆ ಮಾತನಾಡಿರುವ ರಜೌರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಬೀರ್ ಅಹ್ಮದ್ ಭಟ್ ಅವರು, ಘಟನೆಗೆ ಕೆಲ ಪ್ರಯಾಣಿಕರು ಒಂಟೆ ಮಾಂಸವನ್ನು ಹೊತ್ತೊಯ್ಯಿತ್ತಿದ್ದೇ ಕಾರಣ ಎಂದು ತಿಳಿದುಬಂದಿದೆ. ವಾಣಿಜ್ಯ ವಾಹನವೊಂದರಲ್ಲಿ ಕೆಲ ಪ್ರಯಾಣಿಕರು ಸಾಗಿಸುತ್ತಿದ್ದ ಒಂಟೆ ಮಾಂಸವನ್ನು ಇದೀಗ ವಶಕ್ಕೆ ಪಡೆಯಲಾಗಿದೆ. ಆಸ್ತಿ ನಾಶ ಹಾಗೂ ಪ್ರಾಣಾಹಾನಿಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿ ಕರ್ಫ್ಯೂ ಜಾರಿ ಮಾಡಲಾಗಿದೆ. ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.