ಶೋಧ ನಡೆಸುತ್ತಿರುವ ಹೆಲಿಕಾಪ್ಟರ್
ಮುಂಬೈ: ಸೇನಾ ಸಮವಸ್ತ್ರದಲ್ಲಿದ್ದ ನಾಲ್ವರು ಅಪರಿಚಿತ ವ್ಯಕ್ತಿಗಳು ಉರಾನ್ ನೌಕಾ ನೆಲೆಯಲ್ಲಿ ಶಂಕಾಸ್ಪದವಾಗಿ ತಿರುಗಾಡುತ್ತಿರುವುದನ್ನು ತಾವು ನೋಡಿರುವುದಾಗಿ ಶಾಲಾ ಮಕ್ಕಳು ಹೇಳಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಭಾರತೀಯ ನೌಕಾಪಡೆಯ ಮುಖ್ಯ ಪಿಆರ್ ಒ ಕ್ಯಾಪ್ಟನ್ ಡಿ.ಕೆ. ಶರ್ಮಾ ಅವರ ಪ್ರಕಾರ, ಶಂಕಾಸ್ಪದ ವ್ಯಕ್ತಿಗಳನ್ನು ನೋಡಿರುವುದಾಗಿ ಶಾಲಾ ಮಕ್ಕಳು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ನೌಕಾ ಪಡೆ ಮುಂಬೈ ಕರಾವಳಿಯಲ್ಲಿ ಹೈಅಲರ್ಟ್ ಘೋಷಿಸಿದೆ ಮತ್ತು ಮುಂಬಯಿ ಉಗ್ರ ನಿಗ್ರಹ ದಳದೊಂದಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಉರಾನ್ ಮತ್ತು ಕಾರಂಜಾ ಪ್ರದೇಶದಲ್ಲಿ ಸೇನಾ ಸಮವಸ್ತ್ರ ಧರಿಸಿದ್ದ ತಂಡವೊಂದು ಅನುಮಾನ್ಸಪದವಾಗಿ ತಿರುಗಾಡುತ್ತಿದ್ದನ್ನು ತಾವು ನೋಡಿದ್ದಾಗಿ ನಾಲ್ವರು ಶಾಲಾ ಮಕ್ಕಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಜಿಪಿ ಕಚೇರಿ ತಕ್ಷಣವೇ ಎಲ್ಲಾ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಸಾಗರ ಭದ್ರತಾ ಪಡೆಯ ಮಾರ್ಕೋಸ್ ಕಮಾಂಡೋಗಳನ್ನು ಉರಾನ್ ನೌಕಾ ನೆಲೆಯಲ್ಲಿ ನಿಯೋಜಿಸಲಾಗಿದೆ. ಮುಂಬಯಿ ಪೊಲೀಸರು ನಾಕಾಬಂದಿ ಜಾರಿಗೊಳಿಸಿದ್ದು ಪರಿಸ್ಥಿತಿಯನ್ನು ಕಟ್ಟೆಚ್ಚರದಿಂದ ಅವಲೋಕಿಸುತ್ತಿರುವುದಾಗಿ ತಿಳಿದು ಬಂದಿದೆ. ಕೊಲಾಬಾ ಪೊಲೀಸ್ ದಳ ಕೂಡ ತನ್ನ ಉನ್ನತ ಅಧಿಕಾರಿಗಳನ್ನು ವಿಚಕ್ಷಣಾ ಕಾರ್ಯಕ್ಕೆ ನಿಯೋಜಿಸಿದೆ.
ಆದರೆ ಗುಪ್ತಚರ ದಳದ ಮೂಲಗಳ ಪ್ರಕಾರ ಈ ತನಕ ಅಂತಹ ಯಾವುದೇ ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳು ಕಂಡು ಬಂದಿಲ್ಲ. ಶಾಲಾ ಹುಡುಗಿಯೊಬ್ಬಳು ಪೊಲೀಸರಿಗೆ ಶಂಕಾಸ್ಪದ ವ್ಯಕ್ತಿಗಳ ಬಗ್ಗೆ ಹೇಳಿರುವಳಾದರೂ ಆರಂಭಿಕ ತನಿಖೆಯಲ್ಲಿ ಈ ರೀತಿಯ ಯಾವುದೇ ಬೆಳವಣಿಗೆಗಳು ಗೋಚರವಾಗಿಲ್ಲ ಎಂದು ಗುಪ್ತಚರ ದಳ ಹೇಳಿದೆ.