ಮುಂಬೈ: ಎಲ್ಲಾ ಪಾಕ್' ಕಲಾವಿದರು ಮುಂಬೈನ್ನು ತೊರೆದಿದ್ದು, ಅಡಗಿ ಕುಳಿತಿರುವ ಕಲಾವಿದರನ್ನು ಹುಡುಕಿ ದೇಶ ಬಿಟ್ಟು ಹೋಗುವಂತೆ ಮಾಡುತ್ತೇವೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಭಾನುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಾಯಕ ಅಮೇಯ್ ಖೋಪ್ಕಾರ್ ಅವರು, ಪಾಕ್ ಕಲಾವಿದರಿಗೆ ನೀಡಿದ್ದ 48 ಗಂಟೆಗಳ ಗಡುವು ಇದೀಗ ಮುಗಿದಿದ್ದು, ಎಲ್ಲಾ ಪಾಕಿಸ್ತಾನ ಕಲಾವಿದರು ಇದೀಗ ಮುಂಬೈಯನ್ನು ಬಿಟ್ಟು ಹೋಗಿದ್ದಾರೆ. ಅಡಗಿ ಕುಳಿತಿರುವ ಕಲಾವಿದರನ್ನು ಹುಡುಕಿ ದೇಶ ತೊರೆಯುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಜೀ ಕೂಡ ಪಾಕಿಸ್ತಾನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದ್ದ 'ಜೀ ಜಿಂದಾಗಿ' ವಾಹಿನಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ರೀತಿಯ ನಿರ್ಧಾರ ಕೈಗೊಂಡಿರುವುದಕ್ಕೆ 'ಜೀ'ಗೆ ಧನ್ಯವಾದ ಸೂಚಿಸಿಲು ಇಚ್ಛಿಸುತ್ತೇನೆ. ಇದಲ್ಲದೆ, ಇನ್ನು ಕೆಲ ಟಿವಿ ಚಾನೆಲ್ ಹಾಗೂ ರೇಡಿಯೋ ಚಾನೆಲ್ ಗಳು ನಮ್ಮ ಕರೆಗೆ ಸ್ಪಂದನೆ ನೀಡುತ್ತಿದ್ದು, ತಮ್ಮ ಕಾರ್ಯಕ್ರಮಗಳಿಗೆ ಪಾಕಿಸ್ತಾನ ಕಲಾವಿದರನ್ನು ಬಳಸಿಕೊಳ್ಳುತ್ತಿರುವುದನ್ನು ನಿಲ್ಲಿಸಿದೆ. ಪಾಕ್ ಕಲಾವಿದರು ಮತ್ತೆಂದೂ ಭಾರತಕ್ಕೆ ಬರುವ ಪ್ರಯತ್ನಗಳನ್ನು ಮಾಡುವುದಿಲ್ಲ ಎಂಬ ಭರವಸೆ ನಮಗಿದೆ ಎಂದು ತಿಳಿಸಿದ್ದಾರೆ.
ಕಾಶ್ಮೀರದ ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ನಡೆದ ಉಗ್ರರ ದಾಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯು, ಭಾರತದಲ್ಲಿರುವ ಪಾಕಿಸ್ತಾನ ಕಲಾವಿದರು ಕೂಡಲೇ ದೇಶವನ್ನು ಬಿಟ್ಟು ಹೋಗುವಂತೆ ಕರೆ ನೀಡಿತ್ತು. ಅಲ್ಲದೆ, 48 ಗಂಟೆಗಳ ಗಡುವನ್ನೂ ನೀಡಿತ್ತು.