ವಾಷಿಂಗ್ಟನ್: ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದ ಹಿಮಾಚಲ ಪ್ರದೇಶದಲ್ಲಿ ಕಮಲ ಅರಳಿದ್ದು, ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ಮುಂದುವರೆದಿದೆ. ಉಭಯ ರಾಜ್ಯಗಳ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಈ ವಿಚಾರ ಇದೀಗ ಅಂಚಾರಾಷ್ಟ್ರೀಯ ಮಾಧ್ಯಮಗಳಲ್ಲೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷದ ಚುನಾವಣೆಯ ಜೈತ್ರ ಯಾತ್ರೆಯ ಕುರಿತು ವಿದೇಶಿ ಮಾಧ್ಯಮಗಳು ವರದಿ ಮಾಡಿದ್ದು, ಬಿಜೆಪಿ ಪಕ್ಷ 'ಭಾರತದ ಪ್ರಚಂಡ ರಾಜಕೀಯ ಶಕ್ತಿಯಾಗಿದೆ ಎಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ.
ನಿನ್ನೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಹಿಮಾಚಲ ಪ್ರದೇಶದಲ್ಲಿ ಕಮಲ ಪಾಳಯ ಪ್ರಚಂಡ ಜಯ ಸಾಧಿಸಿದ್ದು, ಗುಜರಾತ್ ನಲ್ಲಿ ಮಾತ್ರ ಆಡಳಿತಾರೂಢ ಬಿಜೆಪಿ ಪಕ್ಷ ಕಾಂಗ್ರೆಸ್ ಪಕ್ಷದ ಪ್ರಬಲ ಹೊರಾಟದ ನಡುವೆಯೇ ಪ್ರಯಾಸದ ಗೆಲುವು ಸಾಧಿಸಿದೆ. ಆದರೂ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇನ್ನು ಬಿಜೆಪಿ ಪಕ್ಷದ ಮುಂದುವರೆದ ಚುನಾವಣಾ ಜೈತ್ರ ಯಾತ್ರೆ ವಿದೇಶಿ ಮಾಧ್ಯಮಗಳ ಗಮನ ಸೆಳೆದಿದೆ.
ಈ ಬಗ್ಗೆ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದ್ದು, ಮೋದಿ ಚುನಾವಣಾ ಗೆಲುವನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಭಾರತದಲ್ಲಿ ಬಿಜೆಪಿ ಅಸಾಧಾರಣ ರಾಜಕೀಯ ಶಕ್ತಿಯಾಗಿ ಮುಂದುವರಿದಿದೆ ಎಂದು ಬಣ್ಣಿಸಿದೆ. ಅಲ್ಲದೆ ತನ್ನ ಎದುರಾಳಿ ಪಕ್ಷಗಳ ಆಕ್ರಮಣಕಾರಿ ಪ್ರಚಾರದ ಹೊರತಾಗಿಯೂ ಬಿಜೆಪಿ ಪಕ್ಷ ಗೆಲುವು ಸಾಧಿಸಿದೆ ಎಂದು ವರದಿ ಪ್ರಕಟಿಸಿದೆ. ಇನ್ನು ಇದೇ ವಿಚಾರವಾಗಿ ಸಿಎನ್ ಬಿಸಿ ಕೂಡ ವರದಿ ಮಾಡಿದ್ದು, ಭಾರತದ ಮತದಾರರು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸುಧಾರಣೆಯ ಗುಂಗಿನಿಂದ ಹೊರಬಂದಂತೆ ಕಾಣುತ್ತಿದ್ದು, ಗುಜರಾತ್ ಚುನಾವಣೆಯಲ್ಲಿ ತಮ್ಮ ನಿಲುವು ಪ್ರದರ್ಶಿಸಿದ್ದಾರೆ ಎಂದು ವರದಿ ಮಾಡಿದೆ.
ಆದರೆ ಇದಕ್ಕೆ ತದ್ವಿರುದ್ದ ಎಂಬಂತೆ ಇದೇ ಸಂಸ್ಥೆಯ ಬ್ಲೂಮ್ಬರ್ಗ್ ವಾಹಿನಿ ಪ್ರಧಾನಿ ಮೋದಿ ಅವರ ತೆರಿಗೆ ಸುಧಾರಣೆ ನೀತಿ ಗೇಮ್ ಚೇಂಜರ್ ಆಗಿ ಕಾರ್ಯ ನಿರ್ವಹಿಸಿದೆ ಎಂದು ವರದಿ ಮಾಡಿದೆ.
ಒಟ್ಟಾರೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿದ್ದರೂ, ಅಂತಾರಾಷ್ಟ್ರೀಯ ವಾಹಿನಿಗಳು ಮಿಶ್ರಪ್ರತಿಕ್ರಿಯೆ ನೀಡಿವೆ.