ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ಬಳಿಕ ತಮಿಳನಾಡು ರಾಜಕೀಯದಲ್ಲಿ ಕ್ರಿಪ್ರ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದ್ದು, ಬುಧವಾರ ಮತ್ತೊಂದು ಹೈಡ್ರಾಮಾ ನಡೆದಿದೆ.
ದಿವಂಗತ ಜಯಲಲಿತಾ ಅವರ ನಂಬಿಕಸ್ಥನಾಗಿದ್ದ ಒ. ಪನ್ನೀರ್ ಸೆಲ್ವಂ ಅವರು ಜಯಾಲಲಿತಾ ಆವರ ಆಪ್ತ ಗೆಳತಿ ಶಶಿಕಲಾ ಅವರ ವಿರುದ್ಧ ಬಂಡಾಯವೆದ್ದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಪನ್ನೀರ್ ಸೆಲ್ವಂ ಅವರು ತಮ್ಮನ್ನು ಬಲವಂತದಿಂದ ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಲಾಗಿದ್ದು, ಪಕ್ಷ ಹಾಗೂ ಜನತೆ ಬಯಸಿದರೆ ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲು ಸಿದ್ಧನಿದ್ದೇನೆಂದು ಘೋಷಿಸಿದ್ದಾರೆ.
ಕಳೆದ ರಾತ್ರಿ 9 ಗಂಟೆ ಸುಮಾರಿಗೆ ದಿಢೀರನೇ ಜಯಲಲಿತಾ ಅವರ ಸಮಾಧಿ ಬಳಿ ತೆರಳಿದ ಪನ್ನೀರ್ ಸೆಲ್ವಂ ಅವರು ಅರ್ಧ ಗಂಟೆಗಳ ಕಾಲ ಧ್ಯಾನ ಮಾಡಿದರು. ನಂತರ ಮರೀನಾ ಬೀಚ್ ಬಳಿ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಶಿಕಲಾ ವಿರುದ್ಧ ಕಿಡಿಕಾಡಿದರು.
ರಾಜ್ಯ ಜನತೆಗೆ ಕೆಲವೊಂದು ಸತ್ಯ ಹೇಳಬೇಕಿದೆ. ಜಯಲಲಿತಾ ಅವರ ಆತ್ಮವೇ ಸೂಚನೆ ನೀಡಿದಂತೆ ನಾನು ಈ ವಿಷಯವನ್ನು ಜನರ ಮುಂದಿಡುತ್ತಿದ್ದೇನೆ. ಜಯಲಲಿತಾ ಅವರ ನಿಧನದ ಬಳಿಕ ಪಕ್ಷ ಹಾಗೂ ಸರ್ಕಾರವನ್ನು ಉಳಿಸುವ ಹೊಣೆ ನನ್ನ ಮೇಲಿತ್ತು. ನಾನು ಪಕ್ಷದಲ್ಲಿ ಉನ್ನತ ಹುದ್ದೆ ವಹಿಸಿಕೊಳ್ಳಬೇಕೆಂಬುದು ಅಮ್ಮನ ಆಸೆಯಾಗಿತ್ತು. ಆದರೆ, ನಾನು ಮುಖ್ಯಮಂತ್ರಿ ಆಗುತ್ತಿದ್ದಂತೆಯೇ, ನನ್ನ ಎಲ್ಲಾ ಯತ್ನಗಳಿಗೂ ಹಿರಿಯ ಸಚಿವ ಅಡ್ಡಿ ಮಾಡಿದರು. ನನ್ನ ಎಲ್ಲಾ ಯತ್ನಗಳನ್ನು ವಿಫಲಗೊಳಿಸುವ ಪ್ರಯತ್ನಗಳು ಆರಂಭವಾಗಿತ್ತು.
ಕೆಲ ದಿನಗಳ ಹಿಂದಷ್ಟೇ ಪಕ್ಷದ ಶಾಸಕರೆಲ್ಲಾ ಭಾಗವಿಸಿದ್ದ ಸಭೆಗೆ ನನ್ನನ್ನು ಆಹ್ವಾನಿಸಲಾಗಿತ್ತು. ಆದರೆ, ಅಂಥದ್ದೊಂದು ಸಭೆ ಆಯೋಜನೆಗೊಂಡಿದ್ದೇ ನನಗೆ ಗೊತ್ತಿರಲಿಲ್ಲ. ಶಶಿಕಲಾ ಅವರ ಬಳಿಗೆ ತೆರಳಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದರು.
ಶಶಿಕಲಾ ಅವರನ್ನು ಮುಖ್ಯಮಂತ್ರಿ ಮಾಡುವ ಕಾರಣಕ್ಕಾಗಿ ರಾಜೀನಾಮೆ ನೀಡಬೇಕೆಂದುನಗೆ ಸೂಚನೆ ನೀಡಲಾಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಮತ್ತು ಮುಖ್ಯಮಂತ್ರಿ ಹುದ್ದೆ ಒಬ್ಬರ ಬಳಿಯೇ ಇರಬೇಕು ಎಂದು ಸೂಚಿಸಲಾಯಿತು. ಇದಕ್ಕೆ ನಾನೂ ನಿರಾಕರಿಸಿದರೂ ನನ್ನ ಮೇಲೆ ಒತ್ತರ ಹೇರಿದ್ದರು. ಈ ವೇಳೆ ಜಯಲಲಿತಾ ಅವರ ಸಮಾಧಿ ಬಳಿ ತೆರಳು ಬಿಡಿ ಎಂದು ಕೇಳಿಕೊಂಡೆ. ಆದರೆ, ಪಕ್ಷದ ಶಿಸ್ತು ಮೀರದಂತೆ ಎಚ್ಚರಿಸಿ ನನ್ನನ್ನು ತಡೆಯಲಾಯಿತು. ಬಳಿಕ ಬಲವಂತದಿಂದ ನನ್ನ ರಾಜೀನಾಮೆ ಪಡೆದರು ಎಂದು ಹೇಳಿದ್ದಾರೆ.
ಇದೇ ವೇಳೆ ಜಯಲಲಿತಾ ಅವರನ್ನು ನೆನೆದು ಕಣ್ಮೀರಿಟ್ಟ ಅವರು, ರಾಜ್ಯ ಜನರು ಮತ್ತು ರಾಜ್ಯವನ್ನು ಕಾಪಾಡುವಂತಹ ಮುಖ್ಯಮಂತ್ರಿ ಅಗತ್ಯವಿದೆ. ರಾಜ್ಯದ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ಬಯಸಿದರೆ ನಾನು ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲು ಸಿದ್ಧನಿದ್ದೇನೆಂದು ತಿಳಿಸಿದ್ದಾರೆ.