ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆಯೇ ನ್ಯಾಯಮೂರ್ತಿ ಅಶ್ವಥ್ ನಾರಾಯಣ ಅವರನ್ನು ವಿಶೇಷ ನ್ಯಾಯಾಲದ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಹೊರ ಬಿದ್ದ ಬೆನ್ನಲ್ಲೇ ವಿಶೇಷ ನ್ಯಾಯಾಲಯಕ್ಕೆ ಉಸ್ತುವಾರಿ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಅಶ್ವಥ್ ನಾರಾಯಣ ಅವರನ್ನು ನೇಮಕ ಮಾಡಲಾಗಿದೆ. ಹೀಗಾಗಿ ಅಕ್ರಮ ಆಸ್ತಿ ಪ್ರಕರಣದ ಅಪರಾಧಿಯಾಗಿರುವ ಶಶಿಕಲಾ, ನಟರಾಜನ್ ಮತ್ತು ಇಳವರಿಸಿ ಅವರು ನ್ಯಾಯಮೂರ್ತಿ ಅಶ್ವಥ್ ನಾರಾಯಣ ಅವರ ಮುಂದೆ ಹಾಜರಾಗಲಿದ್ದಾರೆ. ಬಳಿಕ ಕರ್ನಾಟಕ ಪೊಲೀಸರು ಮೂವರ ಅಪರಾಧಿಗಳನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿಕೊಡಲಿದ್ದಾರೆ.
ಈ ಹಿಂದೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ನ್ಯಾ. ಮೈಕಲ್ ಕುನ್ಹಾ ಅವರು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ. ಕುನ್ಹಾ ಬಳಿಕ ಅವರ ಸ್ಥಾನಕ್ಕೆ ಈ ವರೆಗೂ ಬೇರಾವುದೇ ನ್ಯಾಯಾಧೀಶರ ನೇಮಕವಾಗಿರಲಿಲ್ಲ. ಇದರ ಬೆನ್ನಲ್ಲೇ ಅಕ್ರಮ ಆಸ್ತಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಶಶಿಕಲಾ, ನಟರಾಜನ್ ಮತ್ತು ಇಳವರಿಸಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೀಗಾಗಿ ಶಶಿಕಲಾ, ನಟರಾಜ್ ಮತ್ತು ಇಳವರಿಸಿ ವಿಶೇಷ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರಾಗಬೇಕಿತ್ತು.